ಬೆಂಗಳೂರು: ರಾಜ್ಯದ ಹಲವೆಡೆ ಭಾರೀ ಮಳೆಯಾಗಿದೆ. ಉತ್ತರ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಎಲ್ಲೆಲ್ಲೂ ನೀರು ಆವೃತಗೊಂಡಿದ್ದು ಮನೆಗಳಿಗೆ ನೀರು ನುಗ್ಗಿದೆ.
ಇದರೊಂದಿಗೆ ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ. ಉತ್ತರ ಕರ್ನಾಟಕದಲ್ಲಿ ಘಟಪ್ರಭಾ, ದೋಣಿ, ಭೀಮಾ ಸೇರಿದಂತೆ ಅನೇಕ ನದಿಗಳು ತುಂಬಿ ಹರಿಯುತ್ತಿವೆ. ಹಳ್ಳ-ಕೊಳ್ಳಗಳು, ಕೆರೆ ತುಂಬಿ ಹರಿಯುತ್ತಿವೆ.
ಅಪಾಯ ಮಟ್ಟ ಮೀರಿ ನೀರು ನುಗ್ಗಿದ್ದು ಲಕ್ಷಾಂತರ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ಉತ್ತರ ಕರ್ನಾಟಕ ಭಾಗದ ಕಲಬುರ್ಗಿ, ಯಾದಗಿರಿ, ವಿಜಯಪುರ, ಬಳ್ಳಾರಿ, ಬೆಳಗಾವಿ, ಬಾಗಲಕೋಟೆ ಮೊದಲಾದ ಜಿಲ್ಲೆಗಳಲ್ಲಿ ಮಳೆ ಮತ್ತು ಪ್ರವಾಹದಿಂದ ಜನ ತತ್ತರಿಸಿದ್ದಾರೆ. ವಿದ್ಯುತ್ ಪ್ರವಹಿಸಿ, ಗೋಡೆ ಕುಸಿದು ಜೀವಹಾನಿಯಾಗಿದೆ.
113 ಗ್ರಾಮಗಳು ಭಾರಿ ಮಳೆಯಿಂದ ಜಲಾವೃತಗೊಂಡಿವೆ. 325ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು 2.7 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.