ದಾವಣಗೆರೆ: ಜಿಲ್ಲಾ ಮಹಿಳಾ ಅಭಿವೃದ್ಧಿ ನಿಗಮದ 2019-20ನೇ ಸಾಲಿನ ಕಿರುಸಾಲ ಯೋಜನೆಯಡಿ ಪರಿಶಿಷ್ಟ, ಜಾತಿ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸ್ತ್ರೀಶಕ್ತಿ ಗುಂಪುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪರಿಶಿಷ್ಟ ಜಾತಿಯ 9 ಹಾಗೂ ಪರಿಶಿಷ್ಟ ಪಂಗಡದ 12 ಸ್ತ್ರೀ ಶಕ್ತಿ ಗುಂಪುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ. ದಾವಣಗೆರೆ ತಾಲ್ಲೂಕಿಗೆ 05, ಉಳಿದ ತಾಲ್ಲೂಕುಗಳಿಗೆ ತಲಾ 04 ರಂತೆ ಭೌತಿಕ ಗುರಿಯನ್ನು ನಿಗದಿಪಡಿಸಲಾಗಿದ್ದು, ಸ್ತ್ರೀಶಕ್ತಿ ಸಂಘಗಳು ಗುಂಪು ಚಟುವಟಿಕೆಯನ್ನು ಕೈಗೊಳ್ಳಲು ರೂ. 5 ಲಕ್ಷಗಳವರೆಗೆ ಬಡ್ಡಿ ರಹಿತ ಸಾಲ ನೀಡಲಾಗುವುದು.
ಸಾಲ ಪಡೆಯಲು ಇರಬೇಕಾದ ಅರ್ಹತೆಗಳು: ಸ್ತ್ರೀಶಕ್ತಿ ಗುಂಪಿನ ಎಲ್ಲಾ ಸದಸ್ಯರು ಒಟ್ಟಾಗಿ ಸೇರಿ ಒಂದೇ ಆದಾಯೊತ್ಪನ್ನ ಚಟುವಟಿಕೆ ಅಥವಾ ಸಣ್ಣ ಉದ್ದಿಮೆಯನ್ನು ಕೈಗೊಳ್ಳಬೇಕು. ಸ್ತ್ರೀಶಕ್ತಿ ಗುಂಪಿನ ಸದಸ್ಯರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಮಹಿಳೆಯರಾಗಿರಬೇಕು. ಸ್ತ್ರೀಶಕ್ತಿ ಗುಂಪು ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಚಾಲ್ತಿಯಲ್ಲಿರಬೇಕು. ಗುಂಪಿನ ಸದಸ್ಯರು ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು. ಸ್ತ್ರೀಶಕ್ತಿ ಗುಂಪು ವ್ಯವಸ್ಥಿತ ರೀತಿಯಲ್ಲಿ ದಾಖಲೆಗಳನ್ನು ನಿರ್ವಹಿಸುತ್ತಿರಬೇಕು. ಗುಂಪು ಬೇರೆ ಯಾವುದೇ ಆರ್ಥಿಕ ಸಂಸ್ಥೆ ಅಥವಾ ಬ್ಯಾಂಕುಗಳಲ್ಲಿ ಸಾಲಗಾರರಾಗಿರಬಾರದು.
ಆಯ್ಕೆ ವಿಧಾನ: ಗುರಿಯನ್ವಯ ಜಿಲ್ಲಾಮಟ್ಟದ ಆಯ್ಕೆ ಸಮಿತಿ ಸಭೆಯಲ್ಲಿ ಅರ್ಹ ಸ್ತ್ರೀಶಕ್ತಿ ಗುಂಪುಗಳನ್ನು ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸುವ ಆಸಕ್ತ ಸ್ತ್ರೀಶಕ್ತಿ ಗುಂಪಿನವರು ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಎಲ್ಲಾ ದಾಖಲಾತಿಗಳೊಂದಿಗೆ ಜೂ. 25 ರ ಸಂಜೆ 5.30 ರೊಳಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳಿಗೆ ಅರ್ಜಿ ಸಲ್ಲಿಸತಕ್ಕದ್ದು.
ಕೊನೆಯ ದಿನಾಂಕದ ನಂತರ ಬಂದಂತಹ ಹಾಗೂ ಅಪೂರ್ಣ ದಾಖಲಾತಿಗಳನ್ನು ಹೊಂದಿರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08192-296268 ಸಂಪರ್ಕಿಸಬಹುದೆಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.