ಬೆಂಗಳೂರು: ನಿರಂತರ ಮಳೆಯಿಂದಾಗಿ ಶಿರಾಡಿಘಾಟ್ ನಲ್ಲಿ ಮತ್ತೆ ಭೂಕುಸಿತವುಂಟಾಗಿದ್ದು, ಮುಂಜಾಗೃತಾ ಕ್ರಮವಾಗಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಮುಂದಿನ ಆದೇಶದವರೆಗೆ ಶಿರಾಡಿಘಾಟ್ ನಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಹಾಸನ ಎಸ್ ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೋಣಿಗಲ್ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂಕುಸಿತವುಂಟಾಗಿದೆ. ನಿನ್ನೆ ಭೂಕುಸಿತವಾಗಿದ್ದ ಸ್ಥಳದಲ್ಲಿಯೇ ಇಂದು ಮತ್ತೆ ಭೂಮಿ ಕುಸಿದಿದ್ದು, ಈ ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ನಿಷೇಧಿಸಿರುವ ಕಾರಣ ವಾಹನ ಸವಾರರು ಬದಲಿ ಮಾರ್ಗದಲ್ಲಿ ತೆರಳುವಂತೆ ಸೂಚಿಸಿದ್ದಾರೆ. ಕಳೆದ ವರ್ಷವೂ ಶಿರಾಡಿ ಘಾಟ್ ನಲ್ಲಿ ಭಾರಿ ಭೂಕುಸಿತವುಂಟಾದ ಪರಿಣಾಮ ಒಂದು ತಿಂಗಳ ಕಾಲ ವಾಹನ ಸಂಚಾರ ನಿಷೇಧಿಸಲಾಗಿತ್ತು.