ರಾಜ್ಯದಲ್ಲಿ ಕೊರೊನಾ ಕೇಸ್ಗಳು ಮಿತಿಮೀರುತ್ತಿರುವ ಜೊತೆಗೆ ವೈದ್ಯಕೀಯ ಆಮ್ಲಜನಕದ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಕಂಡು ಬರ್ತಿದೆ. ಈಗಾಗಲೇ ಸೂಕ್ತ ಸಮಯದಲ್ಲಿ ಆಮ್ಲಜನಕ ಪೂರೈಕೆಯಾಗದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೋಂಕಿತರು ಉಸಿರುಗಟ್ಟಿ ಸಾವನ್ನಪ್ಪುತ್ತಿದ್ದಾರೆ. ಈ ಸಂಬಂಧ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಿಜೆಪಿ ಸರ್ಕಾರ ಕಾರ್ಯನಿರ್ವಹಣೆಯಲ್ಲಿ ಸಂಪೂರ್ಣವಾಗಿ ಎಡವಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಮಿತಿಮೀರುತ್ತಿದೆ. ಇದು ಕೈ ಮೀರಿ ಹೋಗುವ ಮುನ್ನ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಲೇಬೇಕಿದೆ. ನಮ್ಮ ರಾಜ್ಯದ ಜನರನ್ನ ಉಳಿಸಿಕೊಳ್ಳಬೇಕಿದೆ. ಗುಜರಾತ್ ಹಾಗೂ ಮಹಾರಾಷ್ಟ್ರಕ್ಕೆ ನಮ್ಮ ರಾಜ್ಯದಿಂದ ಆಕ್ಸಿಜನ್ ಪೂರೈಕೆಯಾಗ್ತಿದೆ. ನಾವು ಆಕ್ಸಿಜನ್ ಕೊಡೋದಿಲ್ಲ ಎಂದು ಹೇಳುವ ಧೈರ್ಯ ರಾಜ್ಯ ಬಿಜೆಪಿ ನಾಯಕರಿಗೆ ಇಲ್ಲ. ನಮ್ಮ ಪರಿಸ್ಥಿತಿ ಏನಿದೆ ಅನ್ನೋದನ್ನ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಹೇಳಿದ್ರು.
ನಾನು ಮಾರ್ಚ್ 15ರಂದೇ ಲಾಕ್ಡೌನ್ ಮಾಡಿ ಎಂದು ಸಲಹೆ ನೀಡಿದ್ದೆ. ಆದರೆ ಆಗ ನನ್ನ ಮಾತನ್ನ ಬಿಜೆಪಿ ಸರ್ಕಾರ ಕೇಳಲಿಲ್ಲ. ಇದೀಗ ಲಾಕ್ಡೌನ್ ಮಾಡಿದ್ದಾರೆ. ಆದರೆ 12 ಗಂಟೆಯವರೆಗೆ ಜನರ ಓಡಾಟಕ್ಕೆ ಅನುಮತಿ ಇದೆ. ಈ ರೀತಿ ಮಾಡಿದ್ರೆ ಸೋಂಕನ್ನ ತಡೆಗಟ್ಟಲು ಸಾಧ್ಯವೇ ಇಲ್ಲ. ರಾಜ್ಯ ಸರ್ಕಾರಕ್ಕೆ ಹೇಗೆ ಕಾರ್ಯನಿರ್ವಹಣೆ ಮಾಡಬೇಕು ಅನ್ನೋದೇ ತಿಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.