ಬೆಂಗಳೂರು: ಬಸ್ ಪಾಸ್ ಅವಧಿ ಮುಗಿದಿದ್ದರೂ ವಿದ್ಯಾರ್ಥಿಗಳಿಗಾಗಿ ಹಳೆ ಪಾಸ್ ತೋರಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್ ಗಳ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಕಳೆದ ಶೈಕ್ಷಣಿಕ ವರ್ಷದ ಬಸ್ ಪಾಸ್ ತೋರಿಸಿ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಲಾಗಿದೆ.
ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್ ಸಾರಿಗೆ ಸಚಿವರಿಗೆ ಪತ್ರ ಬರೆದು, ಕೊರೋನಾ ಕಾರಣದಿಂದ ಮುಂದೂಡಿಕೆಯಾಗಿದ್ದ ಪರೀಕ್ಷೆಗಳು ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯುವುದರಿಂದ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದು, ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಈ ಕುರಿತು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅದರಂತೆ ವೃತ್ತಿಪರ ಹಾಗೂ ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ ವಿಶ್ವವಿದ್ಯಾಲಯ, ಕಾನೂನು ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕಳೆದ ಸಾಲಿನ ವಾಸ್ ತೋರಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಕೊರೋನಾ ಕಾರಣದಿಂದ ಕೆಎಸ್ಆರ್ಟಿಸಿ ಆರ್ಥಿಕ ಸಂಕಷ್ಟದಲ್ಲಿದ್ದರೂ ಪರೀಕ್ಷಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ ಎಂದು ಹೇಳಲಾಗಿದೆ.