ಬೆಂಗಳೂರು: ರಾಜ್ಯ ಸರ್ಕಾರ ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಿವಿಧ ಸೇವೆಗಳನ್ನು ಸಕಾಲ ವ್ಯಾಪ್ತಿಗೆ ತಂದಿದ್ದು, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆಯ 29 ಸಕಾಲ ಸೇವೆಗಳು ಮತ್ತು ಸಾರಿಗೆ ಸಂಸ್ಥೆಗಳ ಮೂಲಕ ಸಕಾಲ ಯೋಜನೆಯಡಿ ವಿವಿಧ ಸೇವೆ ನೀಡಲಾಗುವುದು.
ಆನ್ ಲೈನ್ ತಂತ್ರಾಂಶದ ಮೂಲಕ ಅರ್ಜಿ ಸ್ವೀಕರಿಸುವುದು ಮತ್ತು ಸೇವಾ ಸಿಂಧು ಪೋರ್ಟಲ್ ನಲ್ಲಿ ಸಂಯೋಜಿಸಿ ಸಕಾಲ ಸೇವೆಗಳನ್ನು ಕಡ್ಡಾಯವಾಗಿ ಸೇವಾಸಿಂಧು ಮೂಲಕ ನಿರ್ವಹಿಸುವಂತೆ ಆದೇಶಿಸಲಾಗಿದೆ.
ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆಯಿಂದ ಸಕಾಲ ಸೇವೆಗೆ ಲರ್ನಿಂಗ್ ಲೈಸೆನ್ಸ್, ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ, ಆರ್.ಸಿ., ಕಂಡಕ್ಟರ್ ಲೈಸೆನ್ಸ್, ಅರ್ಜಿ ವಿತರಣೆ, ವಿಳಾಸ ಬದಲಾವಣೆ, ಡುಪ್ಲಿಕೇಟ್ ಕಾಪಿ ಮೊದಲಾದ 29 ಸೇವೆಗಳನ್ನು ನಿರ್ವಹಿಸಲಾಗುವುದು.
ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ಅಡಿ ಶಾಲಾ ಮಕ್ಕಳಿಗೆ ಬಸ್ ಪಾಸ್, ಸ್ವಾತಂತ್ರ್ಯ ಹೋರಾಟಗಾರರಿಗೆ ಉಚಿತ ಪಾಸ್, ವಿಕಲಚೇತನರಿಗೆ ರಿಯಾಯಿತಿ ದರದ ಪಾಸ್ ಗಳು, ಅಪಘಾತ ಪರಿಹಾರ ಸೇರಿದಂತೆ 6 ಸೇವೆಗಳನ್ನು ನೀಡಲಾಗುವುದು. ಅದೇ ರೀತಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ವಿವಿಧ ಸೇವೆಗಳನ್ನು ಸಕಾಲ ವ್ಯಾಪ್ತಿಗೆ ತರಲಾಗಿದೆ ಎಂದು ಹೇಳಲಾಗಿದೆ.