ಬೆಂಗಳೂರು: ಲಾಕ್ ಡೌನ್ ಹಿನ್ನಲೆ ಹೆಚ್ಚುವರಿ ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಇರುವುದರಿಂದ ಊರಿಗೆ ಹೋಗುವವರಿಗೆ ಅನುಕೂಲವಾಗುವಂತೆ 1100 ಬಸ್ ಗಳನ್ನು ಬೆಂಗಳೂರಿನಿಂದ ಕಾರ್ಯಚರಣೆಗೊಳಿಸಿದೆ.
ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ನಿಗಮದ ವ್ಯಾಪ್ತಿಯಲ್ಲಿನ ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳೊಂದಿಗೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ಬಸ್ ಗಳ ಕಾರ್ಯಾಚರಣೆಯ ಬಗ್ಗೆ ಕೂಲಂಕುಷ ಪರಾಮರ್ಶೆ ನಡೆಸಿದ್ದಾರೆ.
ಇಂದು 1100 ಬಸ್ ಗಳನ್ನು ಬೆಂಗಳೂರಿನಿಂದ ಇತರೆ ಸ್ಥಳಗಳಿಗೆ ಹೆಚ್ಚುವರಿಯಾಗಿ ಕಾರ್ಯಚರಣೆ ಮಾಡಲು ಯೋಜಿಸಲಾಗಿದೆ. ಪ್ರಮುಖ ಸ್ಥಳಗಳಾದ ಬಳ್ಳಾರಿ, ದಾವಣಗೆರೆ, ಹೊಸದುರ್ಗ, ಯಾದಗಿರಿ, ಹಾಸನ, ಕಲಬುರಗಿ, ಶಿವಮೊಗ್ಗ, ತಿರುಪತಿ, ಅನಂತಪುರ, ಪಾವಗಡಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಗಳು ಕಾರ್ಯಾಚರಣೆಯಾಗಿರುತ್ತವೆ.
ಬೆಂಗಳೂರು ನಗರದಲ್ಲಿ ಒಟ್ಟು 20 ಪಿಕ್‌ಅಪ್ ಸ್ಥಳಗಳಿಂದ ಬಸ್ ಗಳನ್ನು ಕಾರ್ಯಚರಣೆಗೊಳೊಸಲಾಗುತ್ತಿದೆ. ಈ ಎಲ್ಲಾ ಸ್ಥಳಗಳಲ್ಲಿಯೂ ಪ್ರತಿಯೊಬ್ಬ ಪ್ರಯಾಣಿಕರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಬಸ್ ಗಳನ್ನು ನಿಯೋಜಿಸಲು ಸೂಚಿಸಲಾಗಿದೆ.