
ಬೆಂಗಳೂರು: ಕೆಎಸ್ಆರ್ಟಿಸಿ ನಿಗಮದ ಅಧಿಕಾರಿಗಳು, ನೌಕರರಿಗೆ ಒಂದು ವರ್ಷದ ಅವಧಿಗೆ ವೇತನ ಹಾಗೂ ಭತ್ಯೆ ರಹಿತ ವಿಶೇಷ ರಜೆ ಮಂಜೂರು ಮಾಡಲಾಗುವುದು.
ಕೋವಿಡ್-19 ಕಾಯಿಲೆ ಸಾಂಕ್ರಾಮಿಕವಾಗಿ ಹರಡುತ್ತಿರುವುದರಿಂದ ಮತ್ತು ನಿಗಮದಲ್ಲಿ ಸಾರಿಗೆ ಕಾರ್ಯಾಚರಣೆ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿಲ್ಲದ ಕಾರಣ ನಿಗಮ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ನೌಕರರ ಆರೋಗ್ಯ ಹಾಗೂ ನಿಗಮದ ಆರ್ಥಿಕ ಹಿತದೃಷ್ಟಿಯಿಂದ ಷರತ್ತು ಮತ್ತು ನಿಬಂಧನೆಗಳೊಂದಿಗೆ ಕೆಎಸ್ಆರ್ಟಿಸಿ ಅಧಿಕಾರಿಗಳು ನೌಕರರ ಹುದ್ದೆಯ ಹಕ್ಕು ನಿಗಮದಲ್ಲಿ ಉಳಿದಿರುವಂತೆ ಅವರ ಇಚ್ಛೆಯ ಮೇರೆಗೆ ಒಂದು ವರ್ಷ ಅವಧಿಗೆ ವೇತನ ಹಾಗೂ ಭತ್ಯೆ ರಹಿತ ವಿಶೇಷ ರಜೆಯನ್ನು ಮಂಜೂರು ಮಾಡಲು ಪ್ರಸ್ತಾಪಿಸಲಾಗಿದೆ.
ಈ ಬಗ್ಗೆ ಪರಿಶೀಲನೆ ನಡೆಸಿ ಅಭಿಪ್ರಾಯಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಈ ಕುರಿತು ಸೂಚಿಸಿದ್ದಾರೆ.