ಲಾಕ್ ಡೌನ್ ಕಾರಣಕ್ಕೆ ಮುಂದೂಡಿಕೆಯಾಗಿದ್ದ 10ನೇ ತರಗತಿ ಪರೀಕ್ಷೆಗಳನ್ನು ಈಗ ನಿಗದಿಪಡಿಸಲಾಗಿದ್ದು, ಜೂನ್ 25 ರಿಂದ ಜುಲೈ 4ರವರೆಗೆ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಟ್ಟಿರುವ ಸರ್ಕಾರ ಇದಕ್ಕಾಗಿ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು, ಜೊತೆಗೆ ವಿದ್ಯಾರ್ಥಿಗಳು ಪರೀಕ್ಷಾ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ಅಲ್ಲದೇ ಜೂನ್ 18ರಂದು ಬಾಕಿ ಉಳಿದಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪತ್ರಿಕೆಯ ಪರೀಕ್ಷೆ ನಡೆಯಲಿದ್ದು, ಈ ವಿದ್ಯಾರ್ಥಿಗಳು ಸಹ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಅಲ್ಲದೆ ಕೋರಿಕೆ ನಿಲುಗಡೆಗೂ ಅವಕಾಶ ನೀಡಲಾಗಿದೆ.
ಈ ಉಚಿತ ಬಸ್ ಪ್ರಯಾಣದ ಸೌಲಭ್ಯ ಪಡೆದುಕೊಳ್ಳಬಯಸುವ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ನಿರ್ವಾಹಕರಿಗೆ ತೋರಿಸಿದರೆ ಸಾಕು ಎಂದು ತಿಳಿಸಲಾಗಿದೆ. ವಾಪಸ್ ಬರಲು ಸಹ ವಿದ್ಯಾರ್ಥಿಗಳು ಇದೇ ಕ್ರಮವನ್ನು ಅನುಸರಿಸಬೇಕಿದೆ.