ಬೆಂಗಳೂರು: ಆಶ್ರಮ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಹೊರಡಿಸಿದ್ದ ಅಧಿಸೂಚನೆಯನ್ನು ಕರ್ನಾಟಕ ಲೋಕಸೇವಾ ಆಯೋಗ(KPSC) ರದ್ದುಪಡಿಸಿದೆ.
ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ 37 ಹುದ್ದೆ ಮೀಸಲಾಗಿದ್ದವು. ಈ 37 ಹುದ್ದೆ ಸೇರಿದಂತೆ 493 ಹುದ್ದೆಗಳ ನೇಮಕಾತಿಗೆ 2017 ರ ನವೆಂಬರ್ ನಲ್ಲಿ ಲೋಕಸೇವಾ ಆಯೋಗದಿಂದ ಅಧಿಸೂಚನೆ ಹೊರಡಿಸಲಾಗಿತ್ತು.
ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕರ ಮನವಿ ಮೇರೆಗೆ 2018ರ ಜೂನ್ ನಲ್ಲಿ ನೇಮಕಾತಿ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡಲಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹುದ್ದೆಗಳ ನೇಮಕಾತಿಗೆ ನಿರ್ದೇಶನಾಲಯದ ನಿರ್ದೇಶಕರು ಅವಕಾಶ ನೀಡಿದ್ದಾರೆ.
ಶಿಕ್ಷಣ ಇಲಾಖೆಗೆ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ಸಂದರ್ಭದಲ್ಲಿ ಅನುಸರಿಸುವ ಮಾನದಂಡ ಮತ್ತು ಅರ್ಹತೆಗಳ ಅನ್ವಯ ಈ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರ ತೀರ್ಮಾನಿಸಿದ್ದರಿಂದ ಅಧಿಸೂಚನೆಯನ್ನು ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ.