ಹಾಸನ: ವಿಶ್ವದೆಲ್ಲೆಡೆ ವ್ಯಾಪಿಸಿರುವ ಕೊರೋನಾ ರೋಗ ಮನುಕುಲಕ್ಕೆ ಕಂಟಕಪ್ರಾಯವಾಗಿದೆ. ದಿನದಿಂದ ದಿನಕ್ಕೆ ಮಾರಕ ರೋಗ ಹೆಚ್ಚಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ ಎಂದು ಕೋಡಿಮಠದ ಸ್ವಾಮೀಜಿ ಹೇಳಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ಕೋಡಿಮಠದಲ್ಲಿ ಮಾತನಾಡಿದ ಸ್ವಾಮೀಜಿ, ಮಾನವ ಸ್ವಾರ್ಥದಿಂದ ತಂದುಕೊಂಡ ರೋಗ ಮನುಕುಲಕ್ಕೆ ಮಾತ್ರವಲ್ಲದೆ ಮರ, ಪ್ರಾಣಿ, ಪಕ್ಷಿಗಳ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ. ಮನುಷ್ಯರಿಂದಲೇ ಇದು ಹುಷಾರಾಗುವ ಲಕ್ಷಣ ಇದೆ. ರೋಗವನ್ನು ತಡೆಯಲು ಸ್ವಚ್ಛತೆ ಮುಖ್ಯವಾಗುತ್ತದೆ. ಅನೇಕ ತಜ್ಞವೈದ್ಯರು, ಔಷಧಗಳು ನಮ್ಮಲ್ಲಿವೆ. ಇದು ಎಂತಹ ಮಟ್ಟಕ್ಕೆ ಹೋದರೂ ಹೆದರುವ ಅವಶ್ಯಕತೆ ಇಲ್ಲ ಎಂದು ಸ್ವಾಮೀಜಿ ಧೈರ್ಯದ ಮಾತುಗಳನ್ನು ಆಡಿದ್ದಾರೆ.
ಮುಂದೆ ಯುದ್ಧ ಅಂತಹುದೇನೂ ಆಗುವುದಿಲ್ಲ. ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಹೇಳಿದ ಅವರು, ಬೆಂಗಳೂರಿನಲ್ಲಿ ನೆಲೆಸಿರುವ ಮಠದ ಭಕ್ತರೊಬ್ಬರಿಗೆ ಕೊರೋನಾ ಪಾಸಿಟಿವ್ ಬಂದ ಬಗ್ಗೆ ಮಾಹಿತಿ ಇದೆ. ಆತ ಪೂಜೆ ಹೋಮ ಮಾಡುತ್ತಿದ್ದಾನೆ. ಹಿಂದೆ ಸಾಂಕ್ರಾಮಿಕ ರೋಗದ ಬಗ್ಗೆ ಹೇಳಿದ್ದೇನೆ. ಹುಣ್ಣಿಮೆ ನಂತರ ಕೊರೋನಾ ಬಗ್ಗೆ ವಿಸ್ತೃತವಾಗಿ ಹೇಳುತ್ತೇನೆ ಎಂದು ತಿಳಿಸಿದ್ದಾರೆನ್ನಲಾಗಿದೆ.