ಸ್ಯಾಂಡಲ್ ವುಡ್ ನಲ್ಲಿ ಈಗ ಡ್ರಗ್ಸ್ ಕುರಿತು ದೊಡ್ಡ ಚರ್ಚೆ ನಡೆಯುತ್ತಿದೆ. ಇದರಲ್ಲಿ ಭಾಗಿಯಾಗಿದ್ದಾರೆಂಬ ಕಾರಣಕ್ಕೆ ಈಗಾಗಲೇ ನಟಿ ರಾಗಿಣಿ ಬಂಧನಕ್ಕೊಳಗಾಗಿದ್ದು, ಇನ್ನೂ ಕೆಲ ನಟ – ನಟಿಯರು ಈಗ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಇದರ ಮಧ್ಯೆ ʼಕಿರಿಕ್ ಪಾರ್ಟಿʼ ಬೆಡಗಿ ಸಂಯುಕ್ತಾ ಹೆಗ್ಡೆ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ.
ನಟಿ ಸಂಯುಕ್ತಾ ಹೆಗ್ಡೆ ಮತ್ತವರ ಸ್ನೇಹಿತರು ಹೆಚ್.ಎಸ್.ಆರ್. ಲೇ ಔಟ್ ಠಾಣಾ ವ್ಯಾಪ್ತಿಯ ಪಾರ್ಕ್ ನಲ್ಲಿ ವರ್ಕೌಟ್ ಮಾಡುವ ವೇಳೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರು ಅಲ್ಲಿಂದ ತೆರಳುವಂತೆ ಸೂಚಿಸಿದ್ದಾರೆ. ಸಂಯುಕ್ತಾ ಮತ್ತವರ ಸ್ನೇಹಿತರು ಅಸಭ್ಯ ಉಡುಪು ಧರಿಸಿ ಈ ವರ್ಕೌಟ್ ಮಾಡುತ್ತಿದ್ದಾರೆಂಬ ಆರೋಪವೂ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದ್ದು, ಅಲ್ಲಿಂದ ತೆರಳಲು ಸಂಯುಕ್ತಾ ಮತ್ತವರ ತಂಡ ಮುಂದಾದಾಗ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಹೆಚ್.ಎಸ್. ಆರ್. ಲೇ ಔಟ್ ಠಾಣೆ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಕಳುಹಿಸಿಕೊಟ್ಟಿದ್ದಾರೆನ್ನಲಾಗಿದೆ. ಇದರ ಮಧ್ಯೆ ಘಟನೆಯ ಚಿತ್ರೀಕರಣ ಮಾಡಿಕೊಂಡಿರುವ ಸಂಯುಕ್ತಾ, ತಾವುಗಳು ತಮ್ಮ ಪಾಡಿಗೆ ವರ್ಕೌಟ್ ಮಾಡುತ್ತಿದ್ದ ವೇಳೆ ಕೆಲವರು ಅನಗತ್ಯವಾಗಿ ತೊಂದರೆ ನೀಡಿದ್ದಾರೆಂದು ದೂರಿದ್ದಾರೆ. ಈ ವಿಡಿಯೋವನ್ನು ಸಂಯುಕ್ತಾ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಾಕಿದ್ದಾರೆ.
https://www.instagram.com/tv/CEtwP4plMhN/