ಮಂಡ್ಯ ತಾಲೂಕಿನ ಎಸ್ಐ ಕೋಡಿಹಳ್ಳಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಯುವಕನನ್ನು ಬಾಲಕಿಯ ಪೋಷಕರು ಹೊಡೆದು ಕೊಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
30 ವರ್ಷದ ಯುವಕ ಅದೇ ಗ್ರಾಮದ 7 ವರ್ಷದ ಬಾಲಕಿಯನ್ನು ಜುಲೈ 29 ರಂದು ಮಧ್ಯಾಹ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ವಿಷಯ ತಿಳಿದ ಬಾಲಕಿಯ ಪೋಷಕರು ಆತನನ್ನು ಹಿಡಿದು ತೀವ್ರವಾಗಿ ಹಲ್ಲೆ ಮಾಡಿದ್ದು ಅಸ್ವಸ್ಥನಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಕೆರೆಗೋಡು ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು ಮೂವರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ಮೃತಪಟ್ಟ ಯುವಕ ಚಿಕ್ಕಮಕ್ಕಳಿಗೆ ಅಶ್ಲೀಲ ಫೋಟೋ, ವಿಡಿಯೋ ತೋರಿಸುತ್ತಿದ್ದ. ಶಾಲೆ ಇಲ್ಲದ ಕಾರಣ ಮನೆಯಲ್ಲೇ ಇರುವ ಮಕ್ಕಳನ್ನು ಚಾಕೊಲೇಟ್ ಕೊಡಿಸುವುದಾಗಿ ಕರೆದೊಯ್ದು ಇಂತಹ ಕೃತ್ಯ ಎಸಗುತ್ತಿದ್ದನೆನ್ನಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.