
ಬೆಂಗಳೂರು: ನಕಲಿ ದಾಖಲೆ ನೀಡಿ ಆರ್ಥಿಕವಾಗಿ ಸದೃಢರಾದವರು ಪಡೆದುಕೊಂಡಿರುವ ಬಿಪಿಎಲ್ ಕಾರ್ಡ್ ಗಳನ್ನು ಸ್ವಯಂ ಪ್ರೇರಿತವಾಗಿ ಕೂಡಲೇ ಆಹಾರ ಇಲಾಖೆಗೆ ವಾಪಸ್ ನೀಡಬೇಕು. ಇಲ್ಲವಾದಲ್ಲಿ ಅಧಿಕಾರಿಗಳು ಪತ್ತೆ ಮಾಡಿ ದಂಡ ವಿಧಿಸಲಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಎಚ್ಚರಿಕೆ ನೀಡಿದ್ದಾರೆ.
ಮಾನದಂಡಗಳ ಅನ್ವಯ ಇಲ್ಲದ ಕಾರ್ಡ್ ಗಳ ಪರಿಶೀಲನೆ ಕಾರ್ಯ ಕೈಗೊಳ್ಳಲಾಗುತ್ತದೆ. ಅದಕ್ಕಾಗಿ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗವನ್ನು ಬಳಕೆ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆದಿದ್ದು, ಮಾರ್ಗಸೂಚಿ ಉಲ್ಲಂಘಿಸಿ ಪಡೆದ ಎಲ್ಲಾ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲಾಗುವುದು ಎಂದು ಹೇಳಿದ್ದಾರೆ.
ಈ ಹಿಂದೆ ಅನರ್ಹಗೊಂಡಿದ್ದ ಬಿಪಿಎಲ್ ಪಡಿತರ ಚೀಟಿಗಳನ್ನು ಮರು ಸ್ಥಾಪನೆ ಮಾಡಲಾಗಿದೆ. ಹೊಸದಾಗಿ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಕೆಯಾಗಿದ್ದು ಇವುಗಳನ್ನು ಪರಿಶೀಲಿಸಲಾಗಿದೆ. ಅನರ್ಹ ಕಾರ್ಡ್ ಗಗಳ ರದ್ದತಿ ಆಧಾರದ ಮೇಲೆ ಹೊಸ ಬಿಪಿಎಲ್ ಕಾರ್ಡ್ ಮಂಜೂರು ಮಾಡಲಾಗುವುದು ಎಂದರು.
ರೇಷನ್ ಕಾರ್ಡ್ ಗಳಲ್ಲಿ ಹೆಸರು ರದ್ದತಿ, ಹೊಸ ಸದಸ್ಯರ ಸೇರ್ಪಡೆ, ವಿಳಾಸ ಬದಲಾವಣೆ ಸೇರಿ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು, ಈ ಪ್ರಕ್ರಿಯೆ ನಿರಂತರವಾಗಿ ಮುಂದುವರೆಯಲಿದೆ. ಬಿಪಿಎಲ್ ಕಾರ್ಡ್ ಪಡೆಯಲು ಕುಟುಂಬದ ವಾರ್ಷಿಕ ವರಮಾನ 1.20 ಲಕ್ಷ ರೂ. ನಿಗದಿಯಾಗಿದ್ದು, ಇದನ್ನು ಪರಿಷ್ಕರಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.