ಬೆಂಗಳೂರಿನಲ್ಲಿರುವ ಭಾರತೀಯ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯ (ಎನ್ಎಲ್ಎಸ್ಐಯು) ವಿದ್ಯಾರ್ಥಿನಿ ಬರೋಬ್ಬರಿ 18 ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾಳೆ. ಕೇರಳ ಮೂಲದ ಯಮುನಾ ಮೆನನ್ 18 ಸ್ವರ್ಣಪದಕ ಪಡೆದ ಕಾನೂನು ವಿದ್ಯಾರ್ಥಿನಿ. ಇದು ಎನ್ಎಲ್ಎಸ್ಐಯು ಇತಿಹಾಸದಲ್ಲೇ ಮೊದಲು.
2015 ರಲ್ಲಿ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್ಎಟಿ) ಬರೆದು 28ನೇ ರ್ಯಾಂಕ್ ಗಳಿಸಿ, ಎನ್ಎಲ್ಎಸ್ಐಯು ಸೇರಿದ್ದ ಈಕೆಗೆ ಬಂಗಾರದ ಪದಕವನ್ನು ಕೊರೊನಾ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕ ನಡೆಸಿದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಕಟಿಸಲಾಯಿತು.
ಅಂತಾರಾಷ್ಟ್ರೀಯ ಆರ್ಥಿಕ ಕಾನೂನಿಗೆ ಸಂಬಂಧಿಸಿದ ಪತ್ರಿಕೆಗೆ ಮುಖ್ಯ ಸಂಪಾದಕಿಯಾಗಿಯೂ ಕಾರ್ಯ ನಿರ್ವಹಿಸುತ್ತಿರುವ 24 ವರ್ಷದ ಯಮುನಾ, ತಮಿಳುನಾಡಿನ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇರುವ ಸುಮಂಗಲಿ ಎಂಬ ಯೋಜನೆ ಕುರಿತು ಬರೆದ ಲೇಖನವು ಕೇಂಬ್ರಿಡ್ಜ್ ಕಾನೂನು ವಿವಿಯ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಸ್ನಾತಕೋತ್ತರ ಕಾನೂನು ಪದವಿ ಶಿಕ್ಷಣವನ್ನು ಕೇಂಬ್ರಿಡ್ಜ್ ವಿವಿ ವ್ಯಾಪ್ತಿಯ ತ್ರಿನಿಟಿ ಕಾಲೇಜಿನಲ್ಲಿ ಪಡೆದು ಭಾರತಕ್ಕೆ ಮರಳುವುದಾಗಿಯೂ ತಿಳಿಸಿದ್ದಾರೆ.