ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ, ವಾಗ್ಮಿ, ಪ್ರೊ.ಮಹಾಬಲೇಶ್ವರ ಅಣ್ಣಪ್ಪ ಹೆಗಡೆ (73) ಕೊರೊನಾ ಸೋಂಕಿನಿಂದ ವಿಧಿವಶರಾಗಿದ್ದಾರೆ.
ಎಂ.ಎ.ಹೆಗಡೆ ಅವರಿಗೆ ಏಪ್ರಿಲ್ 13ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗಿತ್ತು. ಆದರೆ ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದರು.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಜೋಗನ್ಮನೆಯವರಾದ ಎಂ.ಎ.ಹೆಗಡೆ ತಮ್ಮ 11ನೇ ವಯಸ್ಸಿನಲ್ಲಿಯೇ ಯಕ್ಷಗಾನ ತಾಳಮದ್ದಳೆಯ ಅರ್ಥದಾರಿಯಾಗಿ ರಂಗಪ್ರವೇಶ ಮಾಡಿದ್ದರು. ಕೆರೆಮನೆ ಶಂಭು ಹೆಗಡೆ ಬಳಿ ಅಭ್ಯಾಸ ಮಾಡಿ ಬಣ್ಣ ಹಚ್ಚಿದ್ದರು. ಬಯಲಾಟ ಕಲಾವಿದರು, ಪ್ರಸಂಗಕರ್ತರಾಗಿಯೂ ಕಾರ್ಯನಿರ್ವಹಿಸಿದ್ದ ಅವರು 1973ರರಿಂದ ಸಿದ್ದಾಪುರದ ಮಹಾತ್ಮಾ ಗಾಂಧಿ ಶತಾಬ್ದಿ ಮಹಾವಿದ್ಯಾಲಯದಲ್ಲಿ ಪ್ರಾದ್ಯಾಪಕರಾಗಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ 2006ರಲ್ಲಿ ನಿವೃತ್ತಿ ಹೊಂದಿದ್ದರು.
ಹೆಗಡೆ ಎರಡು ಬಾರಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಅಕಾಡೆಮಿ ಅಧ್ಯಕ್ಷರಾಗಿ ಯಕ್ಷಗಾನ ಕಲೆ ಹಾಗೂ ಕಲಾವಿದರ ಬದುಕಿನ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದರು.