ರೈತರ ವಿರುದ್ಧ ಟ್ವಿಟರ್ನಲ್ಲಿ ಆಕ್ಷೇಪಾರ್ಹ ಬರಹ ಪೋಸ್ಟ್ ಮಾಡಿದ ಹಿನ್ನೆಲೆ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಕರ್ನಾಟಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸರ್ಕಾರ ಅಂಗೀಕರಿಸಿದ ವಿವಾದಾತ್ಮಕ ಕೃಷಿ ಕಾನೂನಿನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ವಿರುದ್ಧ ಕಂಗನಾ ಕಿಡಿಕಾರಿದ್ದರು.
ಗುಂಪುಗಳ ನಡುವೆ ದ್ವೇಷವನ್ನ ಉತ್ತೇಜಿಸುವುದು, ಉದ್ದೇಶಪೂರ್ವಕವಾಗಿ ಅವಮಾನ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ತುಮಕೂರು ಜಿಲ್ಲಾ ನ್ಯಾಯಾಲಯ ಸೂಚನೆ ಹಿನ್ನೆಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಕೀಲ ಎಲ್. ರಮೇಶ್ ನಾಯಕ್ ನೀಡಿದ ದೂರಿನ ಆಧಾರದ ಮೇಲೆ ಕಂಗನಾ ವಿರುದ್ಧ ಪ್ರಕರಣ ದಾಖಲಿಸುವಂತೆ ಜೆಎಂಎಫ್ಸಿ ನ್ಯಾಯಾಲಯ ಕ್ಯಾತಸಂದ್ರ ಪೊಲೀಸ್ ಠಾಣೆ ಪೊಲೀಸರಿಗೆ ಸೂಚನೆ ನೀಡಿದೆ.
ಸೆಪ್ಟೆಂಬರ್ 21ರಂದು ಟ್ವೀಟ್ ಮಾಡಿದ್ದ ಕಂಗನಾ, ಸಿಎಎ ಬಗ್ಗೆ ತಪ್ಪು ಮಾಹಿತಿ ನೀಡಿದ್ದ ಜನರು ಇದೀಗ ರೈತ ಮಸೂದೆ ವಿರುದ್ಧ ಪ್ರತಿಭಟನೆ ಮಾಡೋ ಮೂಲಕ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾದ ಪ್ರತಿಯೊಬ್ಬರು ಭಯೋತ್ಪಾದಕರು. ಇವರೆಲ್ಲ ದೇಶದಲ್ಲಿ ಭಯೋತ್ಪಾದನೆಯನ್ನ ಹಬ್ಬಿಸುತ್ತಿದ್ದಾರೆ ಅಂತಾ ಬರೆದುಕೊಂಡಿದ್ರು. ಕಂಗನಾ ಟ್ವೀಟ್ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿತ್ತು.