ರಾಜ್ಯದಲ್ಲಿ ಜನವರಿ 18ರಿಂದ ಅಧಿಕೃತವಾಗಿ ಜಾರಿಗೆ ತರಲಾದ ಗೋ ಹತ್ಯೆ ನಿಷೇಧ ಕಾಯ್ದೆಯಡಿಯಲ್ಲಿ ವಿಜಯಪುರದಲ್ಲಿ ಮೊದಲ ಬಂಧನವಾಗಿದೆ. ಗೋ ಮಾಂಸ ಮಾರಾಟ ಮಾಡಿದ ಆರೋಪದ ಅಡಿಯಲ್ಲಿ 35 ವರ್ಷದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅಧಿಕೃತ ಮಾಹಿತಿ ನೀಡಿದ್ದಾರೆ. ರೈಲ್ವೆ ಹಳಿಯ ಬಳಿಯಿದ್ದ ಖಾಸಗಿ ಶೆಡ್ನಲ್ಲಿ ಗೋ ಮಾಂಸ ಮಾರಾಟ ಮಾಡಿದ್ದಕ್ಕಾಗಿ ಆರೋಪಿಯನ್ನ ಯಲಗೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ರೇಣುಕಾ ಜಕನೂರು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಯ ಬಂಧನವಾಗಿದೆ. ಖಚಿತ ಮಾಹಿತಿ ಆಧರಿಸಿ ಖಾಸಗಿ ಶೆಡ್ ಮೇಲೆ ದಾಳಿ ನಡೆಸಿದ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದನ್ನ ಸಚಿವ ಪ್ರಭು ಚವ್ಹಾಣ್ ಶ್ಲಾಘಿಸಿದ್ದಾರೆ. ಉಳಿದ ಹಸುಗಳನ್ನ ಯಲಗೂರು ಗೋ ಶಾಲೆಗೆ ಹಸ್ತಾಂತರಿಸಲಾಗಿದೆ.
ಟಾಟಾ ಐಶರ್ನಲ್ಲಿ 12-15 ಹಸುಗಳನ್ನ ಸಾಗಿಸುತ್ತಿದ್ದ ಅಬುದಾಲಿ ಎಂಬ ವ್ಯಕ್ತಿಯನ್ನ ಜನವರಿ 8ರಂದು ಬಂಧಿಸಲಾಗಿತ್ತು. ದಾವಣಗೆರೆಯಿಂದ ಶೃಂಗೇರಿ ಮೂಲಕ ಮಂಗಳೂರಿಗೆ ತೆರಳುತ್ತಿದ್ದ ಎನ್ನಲಾಗಿದೆ. ಆದರೆ ಆ ಸಮಯದಲ್ಲಿ ಕಾಯ್ದೆ ಅಧಿಕೃತವಾಗಿ ಜಾರಿಗೆ ಬರದ ಕಾರಣ ಹಳೆಯ ಕಾನೂನಿನ ಅಡಿಯಲ್ಲೇ ಪ್ರಕರಣದ ದಾಖಲಾಗಿದೆ.