ಬೆಂಗಳೂರು: ಎಪಿಎಂಸಿ, ಕೃಷಿಗೆ ಸಂಬಂಧಿಸಿದ ತಿದ್ದುಪಡಿ ಮಸೂದೆ ವಿರೋಧಿಸಿ ಇಂದು ಕರೆ ನೀಡಲಾದ ಕರ್ನಾಟಕ ಬಂದ್ ಗೆ ರಾಜ್ಯದ ಬಹುತೇಕ ಕಡೆ ಬೆಂಬಲ ವ್ಯಕ್ತವಾಗಿ ಪ್ರತಿಭಟನೆ ನಡೆಸಲಾಗಿದೆ.
ಬೆಂಗಳೂರಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆ, ರೈತ, ಕಾರ್ಮಿಕ ಸಂಘಟನೆ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದ ಬಳಿ ರೈಲು ಪ್ರತಿಭಟನೆ ನಡೆಸಿ ರೈಲು ತಡೆ ಮಾಡಲು ಮುಂದಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರತಿಭಟನೆಗೆ ಇಂದಿಗೆ ಮುಗಿಯುವುದಿಲ್ಲ, ರೈತರು, ಜನವಿರೋಧಿ ಮಸೂದೆ ಹಿಂಪಡೆಯುವವರೆಗೆ ಹೋರಾಟ ಮುಂದುವರೆಯಲಿದೆ ಎಂದು ನಾರಾಯಣಗೌಡ ತಿಳಿಸಿದ್ದಾರೆ. ಕರ್ನಾಟಕ ಬಂದ್ ಬೆಂಬಲಿಸಿ ಬೆಂಗಳೂರು, ಚಿತ್ರದುರ್ಗ, ಚಾಮರಾಜನಗರ, ದಾವಣಗೆರೆ, ಹುಬ್ಬಳ್ಳಿ ಸೇರಿ ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಪ್ರತಿಭಟನೆ ನಡೆಸಲಾಗಿದೆ.