ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು….ತನು ಕನ್ನಡ….ಮನ ಕನ್ನಡ…., ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು….ಹೀಗೆ ನವೆಂಬರ್ ಬರ್ತಿದ್ದಂತೆ ಕರ್ನಾಟಕದಲ್ಲಿ ಕನ್ನಡ ಹಬ್ಬ ಶುರುವಾಗುತ್ತದೆ.
ಎಲ್ಲರಿಗೂ ತಿಳಿದಂತೆ ನವೆಂಬರ್ 1 ಕನ್ನಡ ರಾಜ್ಯೋತ್ಸವ. ಮೈಸೂರು ರಾಜ್ಯಕ್ಕೆ 1973 ನವೆಂಬರ್ 1 ರಂದು ಕರ್ನಾಟಕವೆಂದು ಮರು ನಾಮಕರಣ ಮಾಡಲಾಯ್ತು. ನಾನಾ ಕಡೆ ಹರಿದು ಹಂಚಿ ಹೋಗಿದ್ದ ಕನ್ನಡಿಗರೆಲ್ಲ ಈ ದಿನ ಒಂದಾದ್ರು. ಈ ಶುಭ ದಿನವನ್ನು ಕನ್ನಡಿಗರು ರಾಜ್ಯೋತ್ಸವವಾಗಿ ಆಚರಿಸುತ್ತಾರೆ.
ಕನ್ನಡದ ಬಾವುಟ ಎಲ್ಲೆಲ್ಲೂ ಹಾರಾಡುತ್ತದೆ. ಕನ್ನಡ….ಕನ್ನಡ ಎಂದು ಕನ್ನಡಿಗರೆಲ್ಲ ಕನ್ನಡಾಭಿಮಾನ ಮೆರೆಯುತ್ತಾರೆ. ಆಟೋ, ಬಸ್ ಸೇರಿದಂತೆ ಎಲ್ಲ ವಾಹನಗಳ ಮೇಲೆ ಕನ್ನಡದ ಅಕ್ಷರ, ಕನ್ನಡದ ಬಾವುಟ. ಸಿಹಿ ಹಂಚಿ ಸಂಭ್ರಮಿಸುವ ಜನ. ಆದರೆ ಕೊರೊನಾ ಕಾರಣಕ್ಕೆ ಈ ಬಾರಿ ಅಷ್ಟಾಗಿ ಆಚರಣೆ ಕಂಡು ಬರುತ್ತಿಲ್ಲ
ಆದ್ರೆ ಇತ್ತೀಚಿನ ದಿನಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಿದೆ. ಕೇವಲ ಈ ತಿಂಗಳು ಮಾತ್ರ ಕನ್ನಡ, ಕನ್ನಡ ಎನ್ನುತ್ತ ಜನರು ನಂತ್ರ ಮರೆತುಬಿಡುತ್ತಿದ್ದಾರೆ. ವಿಪರ್ಯಾಸವೆಂದ್ರೆ ಕರ್ನಾಟಕದಲ್ಲಿ ಬದುಕು ಕಟ್ಟಿಕೊಂಡ ಹೊರ ರಾಜ್ಯದ ಹಲವರಿಗೆ ಇಂದಿಗೂ ಕನ್ನಡ ಬರೋದಿಲ್ಲ.
ಕನ್ನಡ ಮಾತನಾಡುವುದು ನಾಚಿಕೆಯ ವಿಷ್ಯ ಎಂದುಕೊಂಡಿದ್ದಾರೆ ರಾಜಧಾನಿ ಬೆಂಗಳೂರಿನ ಬಹಳಷ್ಟು ಮಂದಿ. ಮಕ್ಕಳಿಗೆ ಕನ್ನಡ ಕಲಿಸದ ಪಾಲಕರು ಮನೆಯಲ್ಲೂ ಕನ್ನಡ ಮಾತನಾಡುವುದಿಲ್ಲ. ಬೇರೆ ರಾಜ್ಯಗಳಿಂದ ಬಂದವರ ಜೊತೆ ಅವ್ರ ಭಾಷೆಯಲ್ಲಿ ಮಾತನಾಡುವ ಕನ್ನಡಿಗರು ಅವರಿಗೆ ಕನ್ನಡ ಕಲಿಸುವ ಪ್ರಯತ್ನ ಮಾಡಿದ್ದು ಬೆರಳೆಣಿಕೆಯಷ್ಟು ಮಾತ್ರ. ಇನ್ನಾದರೂ ನಮ್ಮ ಹೆಮ್ಮೆಯ ಭಾಷೆ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿಯೋಣಾ. ಆ ಮೂಲಕ ಕನ್ನಡದ ಕಂಪನ್ನು ಎಲ್ಲೆಡೆ ಅರಳಿಸೋಣಾ.