ಇಂದು ಗ್ರಾಮ ಪಂಚಾಯ್ತಿಯ ಮೊದಲನೇ ಹಂತದ ಮತದಾನ ನಡೆಯುತ್ತಿದೆ. ಬೆಳಗ್ಗೆಯಿಂದಲೇ ಮತ ಚಲಾಯಿಸಲು ಮತದಾರರು ಮತಗಟ್ಟೆಗಳಿಗೆ ಬಂದು ಹೋಗುತ್ತಿದ್ದಾರೆ. ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದರ ನಡುವೆಯೇ ಕಲುಬುರ್ಗಿ ಜಿಲ್ಲೆಯಲ್ಲಿ ಎಡವಟ್ಟೊಂದು ನಡೆದು ಹೋಗಿದೆ.
ಹೌದು, ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಿಣ್ಣಿ ಸಡಕ್ ಗ್ರಾಮ ಪಂಚಾಯ್ತಿಯ 7ನೇ ವಾರ್ಡ್ ಮತಗಟ್ಟೆಯಲ್ಲಿ ಅಭ್ಯರ್ಥಿಗೆ ನೀಡಿದ್ದ ಚಿನ್ಹೆಯೇ ಬದಲಾಗಿದೆ. ಇಲ್ಲಿನ ಪರಿಶಿಷ್ಟ ಜಾತಿ ಸಾಮಾನ್ಯ ಸ್ಥಾನಕ್ಕೆ ಜಯರಾಜ ಎ ಹಲಗಿ ಎಂಬ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದರು. ಇವರಿಗೆ 145 ತುತ್ತೂರಿ ಚಿನ್ಹೆ ನೀಡಲಾಗಿತ್ತು. ಆದರೆ ತುತ್ತೂರಿ ಚಿನ್ಹೆ ಬದಲು 181 ಕಹಳೆ ಊದುತ್ತಿರುವ ಮನುಷ್ಯನ ಚಿನ್ಹೆ ಮುದ್ರಣವಾಗಿದೆ.
ಇನ್ನು ಈ ಎಡವಟ್ಟು ಯಾರ ಗಮನಕ್ಕೂ ಬಂದಿಲ್ಲ. ಅಭ್ಯರ್ಥಿ ಮತ ಹಾಕಲು ಹೋದಾಗ ಗಮನಿಸಿದ್ದಾರೆ. ತಕ್ಷಣವೇ ಮತಗಟ್ಟೆ ಅಧಿಕಾರಿಯ ಗಮನಕ್ಕೆ ತಂದ ಅಭ್ಯರ್ಥಿ ಹಾಗೂ ಅವರ ಕಡೆಯವರು ಮತದಾನವನ್ನು ಸ್ಥಗಿತಗೊಳಿಸಿದ್ದಾರೆ. ಅಷ್ಟೆ ಅಲ್ಲ ಚುನಾವಣಾಧಿಕಾರಿಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.