ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ನನ್ನ ಹಿನ್ನೆಲೆ ಬಗ್ಗೆ ಮಾತನಾಡಿದ್ದಾರೆ.
ಬಹುಶಃ ಅವರಿಗೆ ಸ್ಮರಣ ಶಕ್ತಿ ಕಡಿಮೆ ಇದ್ದಂತಿದೆ. ರಾಜಕೀಯವಾಗಿ ಈಗಾಗಲೇ ಎಷ್ಟು ನೆಲೆಗಳನ್ನು ಬದಲಾಯಿಸಿ ರಾತ್ರೋರಾತ್ರಿ ವಿಮಾನ ಬದಲಿಸಿ ಓಡಾಡಿ ಬಂದವರು ನನ್ನ ಹಿನ್ನೆಲೆ ಬಗ್ಗೆ ಮಾತನಾಡಿದರೆ ರಾಜ್ಯದ ಜನ ನಗುತ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿ ಸಿದ್ಧಾಂತದ ಬಗ್ಗೆ ಮಾತನಾಡುವಷ್ಟು ಅರ್ಹತೆ ಸುಧಾಕರ್ ಅವರಿಗೆ ಬಂದಿದೆಯೆ ಎಂಬುದನ್ನು ಅವರ ಪಕ್ಷದ ಕಾರ್ಯಕರ್ತರು ಕೂಡ ಒಪ್ಪುವುದಿಲ್ಲ. ಡ್ರಗ್ಸ್ ಮಾಫಿಯಾ, ಬೆಟ್ಟಿಂಗ್ ದಂಧೆ ಮಾಡುವವರಿಂದ ವಸೂಲಿ ಮಾಡಿದ ಹಣದಿಂದಲೇ ನನ್ನ ಸರ್ಕಾರ ಬುಡಮೇಲು ಮಾಡಲಾಯಿತು ಎಂಬುದು ಸೂರ್ಯ-ಚಂದ್ರರಷ್ಟೇ ಸತ್ಯ. ಅದನ್ನು ಮುಂಬೈ ವೀರರು ಚೆನ್ನಾಗಿ ಬಲ್ಲರು. ಅದಕ್ಕೆ ಸಚಿವ ಸುಧಾಕರ್ ಹೊರತಲ್ಲ ಎಂದು ಹೇಳಿದ್ದಾರೆ.
ಸಚಿವ ಸ್ಥಾನ ಸಿಕ್ಕಿದೆ ಎಂಬ ಉತ್ಸಾಹದಲ್ಲಿ ನನ್ನ ಹಿನ್ನೆಲೆ-ಮುನ್ನೆಲೆ ಬಗೆಗೆ ಮಾತನಾಡುವುದು ಸುಧಾಕರ್ ಅವರ ನೈಜ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಅಧಿಕಾರ ಶಾಶ್ವತ ಮತ್ತು ತಮ್ಮ ಸ್ವಂತ ಶಕ್ತಿ ಎಂಬ ಭ್ರಮೆಯಲ್ಲಿ ಇರುವವರು ಮಾತ್ರ ಹೀಗೆ ಮಾತನಾಡುತ್ತಾರೆ ಎಂಬುದು ನನ್ನ ಗ್ರಹಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಎರಡು ದಶಕಗಳಿಂದ ಸುಧಾಕರ್ ಅವರು ಯಾವ ಯಾವ ನಾಯಕರಿಗೆ ಎಂತೆಂಥ ಸೇವೆಗಳನ್ನು ಮಾಡಿದ್ದಾರೆ ಎಂಬ ಹಿನ್ನೆಲೆ ಬಗ್ಗೆ ನಾನು ಮಾತನಾಡಲಾರೆ. ಜನಸೇವೆಯಲ್ಲಿ ವಿಶ್ವಾಸವಿಟ್ಟು ರಚನೆಗೊಂಡ ಸರ್ಕಾರವೊಂದು ಮಾಫಿಯಾದ ಹಣದಿಂದ ಹೇಗೆ ಬುಡಮೇಲಾಯಿತು ಎಂಬುದಷ್ಟನ್ನೇ ಜನತೆಯ ಮುಂದೆ ಹೇಳಿದ್ದೇನೆ. ಆದರೆ ಸಚಿವ ಸುಧಾಕರ್ ಹೆಗಲು ಮುಟ್ಟಿಕೊಳ್ಳುವ ಪ್ರಮೇಯ ಉದ್ಭವಿಸಿದ್ದು ಏಕೆಂದು ಅರ್ಥವಾಗಲಿಲ್ಲ ಎಂದು ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.