ಹುಬ್ಬಳ್ಳಿ: ಹೊಸ ಸಂಘಟನೆ ಕಟ್ಟಲು ನಿರ್ಧರಿಸಿದ್ದೇವೆ. ಬಾಗಲಕೋಟೆಯಲ್ಲಿ ಸಂಘಟನೆ ಹೆಸರು ಘೋಷಣೆ ಮಾಡುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಹಿಂದುಳಿದವರಿಗೆ ನ್ಯಾಯ ಕೊಡಲು ಒಂದು ಹೊಸ ಸಂಘಟನೆ ಅಗತ್ಯವಿದೆ. ಸಾಧು-ಸಂತರ ಸೂಚನೆ ಮೇರೆಗೆ ಒಂದು ಹೊಸ ಸಂಘಟನೆ ಕಟ್ಟಲು ತೀರ್ಮಾನ ಮಾಡುದ್ದೇವೆ. ಈ ಸಂಘಟನೆಯ ರೂಪುರೇಷೆ ಬಗ್ಗೆ ಹೆಸರಿನ ಬಗ್ಗೆ ಬಾಗಲಕೋಟೆಯಲ್ಲಿ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಬಾಗಲಕೋಟೆಯ ಚಿರಂತಿಮಠದ ಸಮುದಾಯ ಭವನದಲ್ಲಿ ಅಕ್ಟೋಬರ್ 20ರಂದು ಕಾರ್ಯಕ್ರಮ ನಡೆಯಲಿದೆ. 30-40 ಜನ ಸ್ವಾಮೀಜಿಗಳು ಭಾಗವಹಿಸುತ್ತಾರೆ ಎಂದರು.
ಸಮಾಜದಲ್ಲಿ ಎಲ್ಲರಿಗೂ ಅನ್ಯಾಯವಾಗುತ್ತಿದೆ. ಅನ್ಯಾಯದ ವಿರುದ್ಧ ನಾವು ಹೋರಾಡುತ್ತಿದ್ದೇವೆ. ರಾಣಿಚನ್ನಮ್ಮ ಬ್ರಿಗೇಡ್ ಮಾಡಲು ಸಲಹೆ ಬಂದಿದೆ. ನಮ್ಮ ಸಂಘಟನೆ ಅಲ್ಪಸಂಖ್ಯಾತರ ವಿರುದ್ಧವಲ್ಲ, ಆದರೆ ರಾಷ್ಟ್ರದ್ರೋಹಿ ಮುಸ್ಲಿಂರ ವಿರುದ್ಧ ಎಂದರು.
ನಾನು ರಾಯಣ್ಣ ಬ್ರಿಗೇಡ್ ಕಟ್ಟಿದಾಗ ಜನ ಬೆಂಬಲ ಸಿಕ್ಕಿತ್ತು. ಆದರೆ ಯಡಿಯೂರಪ್ಪ ಅವರುಗೆ ಸಹಿಸಿಕೊಳ್ಳಲು ಆಗದೇ ಅಮಿತ್ ಶಾ ಅವರಿಗೆ ದೂರು ಕೊಟ್ಟರು. ಸಂಘಟನೆ ಬೇಡ ಎಂದರು. ನಾನು ಯಡಿಯೂರಪ್ಪ ಬಳಿ ಪ್ರಾರ್ಥನೆ ಮಾಡಿದರೂ ಕೇಳಲಿಲ್ಲ. ಅಂದು ನಾನು ತಪ್ಪು ಮಾಡಿದೆ. ರಾಯಣ್ಣ ಬ್ರಿಗೇಡ್ ಇರಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿ ಶುದ್ಧೀಕರಣವಾಗಬೇಕು. ಅಪ್ಪ-ಮಕ್ಕಳ ಹೊಂದಾಣಿಕೆಯಿಂದ ಬಿಜೆಪಿ ಮುಕ್ತವಾಗಬೇಕು. ನಾನು ಬಿಜೆಪಿಗೆ ವಾಪಾಸ್ ಹೋಗಲ್ಲ. ನನಗೆ ಸಮಾಧನ ಆದ್ರೆ ಮಾತ್ರ ಹೋಗುತ್ತೇನೆ ಎಂದು ಹೇಳಿದರು.