ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿರುವುದು ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಜಿ.ಟಿ. ದೇವೇಗೌಡ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರಾ ಎಂಬ ಪ್ರಶ್ನೆ ಈಗ ಮೂಡಿದೆ.
ಜೆಡಿಎಸ್ ನಿಂದ ಈಗಾಗಲೇ ಮಾನಸಿಕವಾಗಿ ದೂರ ಸರಿದಿರುವ ಜಿ.ಟಿ. ದೇವೇಗೌಡ ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಅಲ್ಲದೆ ಪಕ್ಷದ ನಾಯಕರಾದ ಹೆಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ಬಹುಕಾಲದಿಂದ ಭೇಟಿಯಾಗಿಲ್ಲ. ಇದರ ಮಧ್ಯೆ ಬಿಜೆಪಿ ಸರ್ಕಾರವನ್ನು ಹಲವು ಸಂದರ್ಭಗಳಲ್ಲಿ ಹೊಗಳುವ ಮೂಲಕ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರಾ ಎಂಬ ಅನುಮಾನ ಮೂಡಿಸಿದ್ದರು.
ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗುವ ಮೂಲಕ ಮತ್ತೊಂದು ಪ್ರಶ್ನೆ ಹುಟ್ಟುವಂತೆ ಕಾರಣರಾಗಿದ್ದಾರೆ. ಜಿ.ಟಿ. ದೇವೇಗೌಡ ಕಾಂಗ್ರೆಸ್ ಸೇರ್ಪಡೆಗೊಂಡು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ತಮ್ಮ ಭೇಟಿ ಕುರಿತು ಪ್ರತಿಕ್ರಿಯಿಸಿರುವ ಜಿ.ಟಿ. ದೇವೇಗೌಡ ಇದೊಂದು ಸೌಹಾರ್ದ ಭೇಟಿ ಎಂದು ತಿಳಿಸಿದ್ದಾರೆ.