ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಆಫ್ರಿಕನ್ ಪ್ರಜೆ ಏಕಾಏಕಿ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಆತನ ಸ್ನೇಹಿತರು, ಸಂಬಂಧಿಕರು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಂಗಳೂರಿನ ಜೆ.ಸಿ. ನಗರ ಠಾಣೆ ಎದುರು ನಡೆದಿದೆ.
5ಗ್ರಾಂ ಎಂಡಿಎಂ ಡ್ರಗ್ಸ್ ಜೊತೆಗೆ ಆಫ್ರಿಕನ್ ಪ್ರಜೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪೊಲೀಸ್ ವಶದಲ್ಲಿದ್ದ ಆರೋಪಿ ಏಕಾಏಕಿ ಅನಾರೋಗ್ಯಕ್ಕೀಡಾಗಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದ ಎನ್ನಲಾಗಿದೆ.
ಪೊಲೀಸರ ದೌರ್ಜನ್ಯದಿಂದಲೇ ತಮ್ಮ ಸ್ನೇಹಿತ ಹಾಗೂ ಸಂಬಂಧಿ ಸಾವನ್ನಪ್ಪಿದ್ದಾನೆ. ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿ ಆಫ್ರಿಕನ್ ಪ್ರಜೆಗಳು ಜೆ.ಸಿ ನಗರ ಠಾಣೆ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.