ಆಗಸ್ಟ್ 13 ಅಂತಾರಾಷ್ಟ್ರೀಯ ಎಡಚರರ (ಎಡಗೈ ಬಳಕೆದಾರರ) ದಿನ. 1992 ರಲ್ಲಿ ಇದೇ ದಿನದಂದು ಪ್ರಮುಖ ಎಡಗೈ ಬಳಕೆದಾರರ ಕ್ಲಬ್ ರಚನೆಯಾಯಿತು.
ಅಂದಿನಿಂದ ಎಡಗೈ ಬಳಕೆದಾರರ ದಿನ ಆಚರಣೆ ಹೆಚ್ಚು ಮುನ್ನೆಲೆಗೆ ಬಂದಿದೆ. ಈ ದಿನದ ಆಚರಣೆಯಿಂದ ಎಡಗೈ ಬಳಕೆ ಮಾಡುವವರಿಗಿರುವ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಜನರಿಗೆ ಅರಿವು ಮೂಡುತ್ತಿದೆ.
ವಿವಿಧೆಡೆ ಪಬ್ ಗಳಲ್ಲಿ ಎಡಗೈಯಿಂದ ಬಾಟಲಿಯ ಮುಚ್ಚಳ ತೆಗೆದು ಪಾನೀಯ ಕುಡಿಯುವ, ಎಡಗೈಯಿಂದಲೇ ಆಟವಾಡುವ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.
ಎಡಗೈ ಬಳಕೆದಾರರು ತಮ್ಮ ದೈನಂದಿನ ಜೀವನದಲ್ಲಿ ಹಲವು ಹೊಂದಾಣಿಕೆ ಹಾಗೂ ರೂಪಾಂತರಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಏಕೆಂದರೆ, ವಿಶ್ವದಲ್ಲಿ ಬಹುತೇಕ ವಸ್ತುಗಳನ್ನು ಬಲಗೈ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಉತ್ಪಾದನೆ ಮಾಡಲಾಗಿರುತ್ತದೆ. ಇದರಿಂದ ಎಡಗೈ ಬಳಕೆದಾರರಿಗೆ ಹಲವು ವಸ್ತುಗಳನ್ನು ಬಳಕೆ ಮಾಡುವುದು ತುಂಬಾ ಕಷ್ಟದಾಯಕ ಅಥವಾ ಅಸಾಧ್ಯವಾಗಿದೆ.
ಆನುವಂಶೀಯ ಕಾರಣಗಳಿಗೆ ಹಲವರು ಎಡಗೈ ಬಳಕೆದಾರರಾಗುತ್ತಾರೆ. ಮಕ್ಕಳು ತಮ್ಮ 18 ನೇ ತಿಂಗಳಿನಿಂದ ತಮ್ಮ ಕಾರ್ಯಗಳಿಗೆ ಕೈಯ್ಯನ್ನು ಹೆಚ್ಚು ಬಳಕೆ ಮಾಡಲು ಪ್ರಾರಂಭಿಸುತ್ತಾರೆ. ಆಗಲೇ ಅವರು ಎಡಕೈ ಬಳಕೆದಾರರೋ ಅಥವಾ ಬಲಗೈ ಬಂಟರೊ ಎಂಬುದು ಪಾಲಕರ ಅರಿವಿಗೆ ಬರುತ್ತದೆ. ಮಕ್ಕಳಿಗೆ ಬರೆಯಲು ಅಥವಾ ಇತರ ಕಾರ್ಯಗಳಿಗೆ ಬಲಗೈಯ್ಯನ್ನೇ ಬಳಸಬೇಕು ಎಂದು ಒತ್ತಾಯ ಮಾಡಬಾರದು. ಅವರನ್ನು ಹೀಯಾಳಿಸಬಾರದು. ಇದರಿಂದ ಮಕ್ಕಳ ಆತ್ಮಸ್ಥೈರ್ಯಕ್ಕೆ ಧಕ್ಕೆ ಬರುತ್ತದೆ ಎಂಬುದು ತಜ್ಞರ ಅಭಿಪ್ರಾಯ.