ನವದೆಹಲಿ: ಕೊರೋನಾ ವೈರಸ್ ತಡೆಯುವ ನಿಟ್ಟಿನಲ್ಲಿ ಎರಡನೇ ಲಸಿಕೆ ಮಾನವ ಪ್ರಯೋಗಕ್ಕೆ ಅನುಮೋದನೆ ನೀಡಲಾಗಿದೆ.
ಅಹಮದಾಬಾದ್ ಮೂಲದ ಜೈಡುಸ್ ಕ್ಯಾಡಿಲಾ ಹೆಲ್ತ್ ಕೇರ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಪ್ರಾಯೋಗಿಕ ಲಸಿಕೆಯನ್ನು ಮಾನವ ಪ್ರಯೋಗಗಳಿಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದಿಸಿದೆ. ಸಂಭವನೀಯ ಲಸಿಕೆಯನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಿ ನಡೆಸಿದ ಅಧ್ಯಯನದಲ್ಲಿ ರೋಗನಿರೋಧಕ ಪ್ರತಿಕ್ರಿಯೆ ತೋರಿಸಿದೆ. ಇದರ ಬಳಕೆಯಿಂದ ಉತ್ಪತ್ತಿಯಾಗುವ ಪ್ರತಿಕಾಯಗಳು ವೈರಸ್ ಅನ್ನು ಸಂಪೂರ್ಣವಾಗಿ ತಟಸ್ಥಗೊಳಿಸುವಲ್ಲಿ ಸಮರ್ಥವಾಗಿದೆ ಎಂದು ಕ್ಯಾಡಿಲಾ ಹೆಲ್ತ್ ಕೇರ್ ಭಾಗವಾಗಿರುವ ಜೈಡುಸ್ ಭಾರತೀಯ ಷೇರು ವಿನಿಮಯ ಕೇಂದ್ರಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಎರಡು ದಿನಗಳ ಹಿಂದೆ ಭಾರತ್ ಬಯೋಟೆಕ್ ಲಸಿಕೆ ‘ಕೊವ್ಯಾಕ್ಸಿನ್’ ಹೊಸ ಭರವಸೆ ಮೂಡಿಸಿದ್ದು, ಪ್ರಯೋಗದ ನಂತರ ಬಿಡುಗಡೆಗೆ ತಯಾರಿ ನಡೆದಿದೆ. ಈಗ ಎರಡನೇ ಲಸಿಕೆ ಸಿದ್ಧವಾಗತೊಡಗಿದೆ. ಇದು ಕೂಡ ಹೊಸ ಭರವಸೆ ಮೂಡಿಸಿದೆ.