ಕೊಪ್ಪಳದಲ್ಲಿ ಗೊಂಬೆಗಳ ಉತ್ಪಾದನೆ ಮಾಡುವ ಕೈಗಾರಿಕಾ ಕ್ಲಸ್ಟರ್‌ಗೆ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ ಚಾಲನೆ ಕೊಟ್ಟಿದ್ದಾರೆ.
ಕೊಪ್ಪಳ ಟಾಯ್ ಕ್ಲಸ್ಟರ್ ದೇಶದ ಮೊದಲ ಸಮಗ್ರ ಉತ್ಪಾದನಾ ಕ್ಲಸ್ಟರ್ ಆಗಿದ್ದು, ಉತ್ತರ ಕರ್ನಾಟಕದ ಈ ಪ್ರದೇಶದಲ್ಲಿ ಉದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಚಾಲನೆ ಕೊಡಲಾಗಿದೆ. ಆದರೆ ಈ ಕ್ಲಸ್ಟರ್‌ನಲ್ಲಿ ಇಲ್ಲಿನ ಸಾಂಪ್ರದಾಯಿಕ ಕಿನ್ನಳ ಗೊಂಬೆಗಳನ್ನು ಮಾಡುವುದಿಲ್ಲ. ಬದಲಾಗಿ ಪ್ಲಾಸ್ಟಿಕ್ ಗೊಂಬೆಗಳ ಉತ್ಪಾದನೆ ಮಾಡಲಾಗುತ್ತದೆ.
400 ಎಕರೆ ವಿಸ್ತೀರ್ಣದಲ್ಲಿ ಹಬ್ಬಲಿರುವ ಈ ಕ್ಲಸ್ಟರ್‌ನಲ್ಲಿ ಗೊಂಬೆ ಉತ್ಪಾದನೆಯ 100 ಘಟಕಗಳು ತಲೆಯೆತ್ತುವ ನಿರೀಕ್ಷೆಯಿದ್ದು, 5000 ಕೋಟಿ ರೂಗಳ ಹೂಡಿಕೆ ಆಕರ್ಷಿಸುವ ನಿರೀಕ್ಷೆ ಇದೆ.
ಭಾರತವನ್ನು ಗೊಂಬೆಗಳ ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಇತ್ತೀಚೆಗೆ ’ಟಾಯ್ಕಾಥಾನ್’ ಅಭಿಯಾನಕ್ಕೆ ಚಾಲನೆ ಕೊಟ್ಟಿದೆ.
ಮುಂದಿನ ಒಂದು ವರ್ಷದ ಅವಧಿಯಲ್ಲಿ ಪ್ರತ್ಯಕ್ಷ/ಪರೋಕ್ಷವಾಗಿ ಅಂದಾಜು ಒಂದು ಲಕ್ಷ ಉದ್ಯೋಗಗಳನ್ನು ಈ ಕ್ಲಸ್ಟರ್ ಸೃಷ್ಟಿಸಲಿದೆ ಎನ್ನಲಾಗುತ್ತಿದೆ.