ಬೆಂಗಳೂರು: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲರಿಗೂ ನಮನಗಳು. ಕಲ್ಯಾಣ ರಾಜ್ಯವನ್ನು ಕಟ್ಟುವುದು ನಮ್ಮ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಕೊರೊನಾ ಸಂಕಷ್ಟದಲ್ಲಿ ರಾಮ ರಾಜ್ಯದ ಕನಸು ನನಸು ಮಾಡಲು ಯತ್ನ ನಡೆಸಲಾಗಿದೆ ಎಂದು ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ ತಿಳಿಸಿದ್ದಾರೆ.
ರೈತರು, ಉದ್ಯಮಿಗಳಿಗೆ ಲಾಭವಾಗುವಂತೆ ಭೂಮಿಯನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಉದ್ಯೋಗಾವಕಾಶ ಸೃಷ್ಟಿಗೆ ಹಲವು ಯೋಜನೆ ಕೈಗೊಳ್ಳಲಾಗಿದೆ. ಸವಾಲು ಎದುರಿಸುವಲ್ಲಿ ಸರ್ಕಾರ ಅಚಲವಾಗಿ ಮುನ್ನಡೆದಿದೆ. ಒಂದು ವರ್ಷದ ಅವಧಿಯಲ್ಲಿ ಹಲವಾರು ಸಮಸ್ಯೆಗಳ ನಡುವೆಯೂ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದೇವೆ ಎಂದು ಹೇಳಿದ್ದಾರೆ.
ಪ್ರವಾಹ, ನೆರೆ ಹಾನಿ, ಕೊರೊನಾ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಿದ್ದೇವೆ. ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆ ಅಡಿ ಸುಮಾರು 1 ಕೋಟಿ ಜನರಿಗೆ ಚಿಕಿತ್ಸೆ ನೀಡಲಾಗಿದೆ. ಲಾಕ್ ಡೌನ್ ಜಾರಿಮಾಡಿದ ಕಾರಣ ಆರ್ಥಿಕ ವ್ಯವಹಾರ ಕುಸಿದಿತ್ತು. ಅದೆಲ್ಲವನ್ನು ಎದುರಿಸಿ ವಾಣಿಜ್ಯ ಚಟುವಟಿಕೆಗಳ ಚೇತರಿಕೆಗೆ ಕ್ರಮಕೈಗೊಳ್ಳಲಾಗಿದೆ. ಸಂಕಷ್ಟದಲ್ಲಿದ್ದ ವಿವಿಧ ವಲಯದ ಜನರಿಗೆ ಆರ್ಥಿಕ ನೆರವು ನೀಡಲಾಗಿದೆ ಎಂದು ತಿಳಿಸಿದ್ದಾರೆ.