ಕುಟುಂಬಸ್ಥರು ಕೊರೊನಾ ರೋಗಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ರು ಅಂದರೆ ಅವರನ್ನ ಮುಖತಃ ಭೇಟಿಯಾಗೋಕೆ ಭಾಗಶಃ ಆಸ್ಪತ್ರೆಗಳಲ್ಲಿ ಅವಕಾಶವನ್ನ ನೀಡೋದಿಲ್ಲ. ಹೀಗಾಗಿ ಐಸಿಯು ಒಳಗೆ ರೋಗಿಯ ಪರಿಸ್ಥಿತಿ ಏನಾಗಿದೆ ಅನ್ನೋ ಚಿಂತೆ ಕುಟುಂಬಸ್ಥರಿಗೆ ಕಾಡೋದು ಸಹಜ.
ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಪ್ರತಿ ದಿನ ಸಂಜೆ 5 ಗಂಟೆ ಸುಮಾರಿಗೆ 45 ಐಸಿಯು ಬೆಡ್ನಲ್ಲಿರುವ ಕೋವಿಡ್ ರೋಗಿಗಳನ್ನ ಸಿಸಿ ಟಿವಿ ಮೂಲಕ ಕುಟುಂಬಸ್ಥರಿಗೆ ತೋರಿಸಲಾಗುತ್ತಿದೆ. ಈ ಮೂಲಕ ಸೋಂಕಿತರ ಕುಟುಂಬಸ್ಥರು ದಿನಕ್ಕೆ ಒಂದು ಬಾರಿಯಾದರೂ ಸೋಂಕಿತರನ್ನ ಕಾಣಬಹುದಾಗಿದೆ.
ನಾವು ಖಾಸಗಿ ಆಸ್ಪತ್ರೆಯಲ್ಲಿದ್ದೆವು. ಹಾಗೂ ಅಲ್ಲಿ ದಿನಕ್ಕೆ 60 ಸಾವಿರ ರೂಪಾಯಿ ಬಿಲ್ ಪಾವತಿ ಮಾಡುತ್ತಿದ್ದೆವು. ಆದರೆ ಮೂರು ದಿನಗಳ ಹಿಂದೆ ಇಲ್ಲಿಗೆ ಶಿಫ್ಟ್ ಆಗಿದ್ದೇವೆ. ಇಲ್ಲಿ ಇತರೆ ಆಸ್ಪತ್ರೆಗಳಿಗಿಂತ ಭಿನ್ನವಾಗಿ ಚಿಕಿತ್ಸೆ ಪಡೆಯುತ್ತಿರುವ ನಮ್ಮ ಸಂಬಂಧಿಗಳನ್ನ ದಿನಕ್ಕೊಮ್ಮೆ ತೋರಿಸುತ್ತಾರೆ. ಇದು ನಿಜಕ್ಕೂ ಸಮಾಧಾನಕರ ವಿಚಾರವಾಗಿದೆ ಎಂದು ಬಾಲಾ ಕೆ. ಎಂಬವರು ಹೇಳಿದ್ರು. ಬಾಲಾ ಎಂಬವರ 32 ವರ್ಷದ ಬಾವ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಲ್ಲಿ ಐಸಿಯು ಬಹುತೇಕ ರೋಗಿಗಳಿಂದ ತುಂಬಿ ಹೋಗಿದೆ. ಇನ್ನು ಬೆರಳಣಿಕೆಯಷ್ಟು ಬೆಡ್ಗಳು ಮಾತ್ರ ಬಾಕಿ ಉಳಿದಿದೆ. ಬೇರೆ ವಾರ್ಡ್ನಲ್ಲಿರುವ ಸೋಂಕಿತರ ಸ್ಥಿತಿ ಗಂಭೀರವಾದಲ್ಲಿ ಬೇಕು ಎಂಬ ಕಾರಣಕ್ಕೆ ಈ ಬೆಡ್ಗಳನ್ನ ಕಾಯ್ದಿರಿಸಲಾಗಿದೆ ಎಂದು ಕರ್ತವ್ಯ ನಿರತ ವೈದ್ಯರು ಹೇಳಿದ್ದಾರೆ.