2020 ರಲ್ಲಿ ಕಾಣಿಸಿಕೊಂಡ ಕೊರೊನಾದ ಮೊದಲ ಅಲೆ ಮಕ್ಕಳಿಗೆ ತುಂಬಾ ಅಪಾಯಕಾರಿ ಅಲ್ಲ ಎನ್ನಲಾಗಿತ್ತು. ಕಡಿಮೆ ಪ್ರಮಾಣದಲ್ಲಿ ಮಕ್ಕಳು ಕೊರೊನಾಗೆ ತುತ್ತಾಗಿದ್ದರು. ಆದ್ರೆ ಎರಡನೇ ಅಲೆಯಲ್ಲಿ ಕೊರೊನಾ ಸೋಂಕಿತ ಮಕ್ಕಳ ಸಂಖ್ಯೆ ಹೆಚ್ಚಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸೋಂಕಿಗೆ ಒಳಗಾಗುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಪೋಷಕರು ಆತಂಕದಲ್ಲಿದ್ದು,ವಅನೇಕ ಪ್ರಶ್ನೆ ಎದುರಾಗಿದೆ.
ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಬೆಂಗಳೂರಿನ ಹಿರಿಯ ಶಿಶುವೈದ್ಯ ಡಾ. ಶ್ರೀನಾಥ್ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಮಗುವಿಗೆ ಕೊರೊನಾ ಸೋಂಕು ಇದ್ದರೆ, ಯಾವ ಪರೀಕ್ಷೆಯನ್ನು ಮಾಡಬೇಕು…?
ಮಕ್ಕಳಿಗೂ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನೂ ಮಾಡಲಾಗುತ್ತದೆ. ಬಯಸಿದ್ರೆ ರ್ಯಾಪಿಡ್ ಆಂಟಿಜೆನ್ ಪರೀಕ್ಷೆ ಕೂಡ ಮಾಡಿಸಬಹುದು. ಆದ್ರೆ ಇದ್ರಲ್ಲಿ ಸರಿಯಾದ ಮಾಹಿತಿ ಸಿಗುವುದಿಲ್ಲ.
ಕೋವಿಡ್ ಪಾಸಿಟಿವ್ ಆಗಿರುವ ಮಗುವನ್ನು ಹೇಗೆ ನೋಡಿಕೊಳ್ಳಬೇಕು…?
ಮಗುವನ್ನು ಮನೆಯಲ್ಲಿ ಪ್ರತ್ಯೇಕವಾಗಿರಿಸಬೇಕೂ. ಆದ್ರೆ ಎಲ್ಲ ಮಕ್ಕಳಿಗೂ ಇದು ಸಾಧ್ಯವಿಲ್ಲ. ಆಗ ಪಾಲಕರು ಮಾಸ್ಕ್ ಹಾಗೂ ಪಿಪಿಇ ಕಿಟ್ ಧರಿಸಬೇಕಾಗುತ್ತದೆ. 100 ಡಿಗ್ರಿಗಿಂತ ಹೆಚ್ಚು ಜ್ವರವಿದ್ದರೆ ಪ್ಯಾರೆಸಿಟಮಾಲ್ ನೀಡಬೇಕು. ದೇಹದಲ್ಲಿ ನೀರಿನ ಕೊರತೆಯಾಗದಂತೆ ಹೆಚ್ಚು ದ್ರವ ಪದಾರ್ಥಗಳನ್ನು ನೀಡಬೇಕು. ಮನೆಯಲ್ಲಿಯೇ ಸಾಮಾನ್ಯ ಆಹಾರ ನೀಡಬೇಕು.
ಕೋವಿಡ್ ಬಂದಿರುವ ಮಗುವಿನಲ್ಲಿ ಗಮನಿಸಬೇಕಾದ ಲಕ್ಷಣಗಳು ಯಾವುವು…?
ಮಗುವಿಗೆ ಉಸಿರಾಟದಲ್ಲಿ ತೊಂದರೆ ಉಂಟಾಗ್ತಿದೆಯೇ ಎಂಬುದನ್ನು ನೋಡಬೇಕು. ಉಸಿರಾಡುವಾಗ ಕಿರಿಕಿರಿಯಾಗ್ತಿದೆಯೇ ಎಂಬುದನ್ನು ಪರೀಕ್ಷಿಸಬೇಕು. 4 ದಿನಗಳಿಗಿಂತ ಹೆಚ್ಚು ಕಾಲ ಜ್ವರವಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಪೋಷಕರು ಪಾಸಿಟಿವ್ ಆಗಿದ್ದಾಗ ಏನು ಮಾಡಬೇಕು…?
ಪೋಷಕರಿಗೆ ಕೊರೊನಾ ಕಾಣಿಸಿಕೊಂಡಾಗ, ಮನೆಯಲ್ಲಿ ಪೋಷಕರು ಮಕ್ಕಳು ಮಾತ್ರ ಇರುವಾಗ ಪ್ರತ್ಯೇಕವಾಗಿರುವುದು ಕಷ್ಟ. ಆಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಗುವನ್ನು ಬೇರೆ ಕಡೆ ಕಳುಹಿಸುವುದು ಸೂಕ್ತವಲ್ಲ. ಮಗುವಿಗೆ ಕೊರೊನಾ ಲಕ್ಷಣ ರಹಿತವಾಗಿರಬಹುದು. ಇದು ಬೇರೆಯವರಿಗೆ ಹರಡುವ ಸಾಧ್ಯತೆಯಿರುತ್ತದೆ.
ಸ್ತನ್ಯಪಾನ ಮಾಡಿಸುತ್ತಿರುವ ತಾಯಿಗೆ ಕೊರೊನಾ ಬಂದ್ರೆ ಏನು ಮಾಡಬೇಕು…?
ಸ್ತನ್ಯಪಾನ ಮಾಡುವ ತಾಯಿಗೆ ಕೊರೊನಾ ಕಾಣಿಸಿಕೊಂಡಲ್ಲಿ ನವಜಾತ ಶಿಶುವಿಗೆ ಹಾಲು ಕುಡಿಸಬಹುದು. ಆದ್ರೆ ಎಲ್ಲ ಎಚ್ಚರಿಕೆ ತೆಗೆದುಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಸ್ಯಾನಿಟೈಜನರ್ ಬಳಸಬೇಕು. ಬ್ರೆಸ್ಟ್ ಪಂಪ್ ಮೂಲಕ ಹಾಲು ತೆಗೆದು ಮಗುವಿಗೆ ಬಾಟಲಿಯಲ್ಲಿ ಕುಡಿಸಬೇಕು.
ಮಕ್ಕಳಲ್ಲಿಯೂ ವಯಸ್ಕರಂತೆ ಮತ್ತೊಮ್ಮೆ ಇನ್ಫೆಕ್ಷನ್ ಆಗುವ ಅಪಾಯವಿರುತ್ತದೆ. ಹಾಗಾಗಿ ಎಚ್ಚರಿಕೆ ವಹಿಸಬೇಕಾಗುತ್ತದೆ.