ಉತ್ತರ ಕನ್ನಡ ಜಿಲ್ಲೆ ಹಲವಾರು ಪ್ರಾಕೃತಿಕ ವಿಸ್ಮಯವನ್ನು ಹೊಂದಿದ್ದು, ಮಾತ್ರವಲ್ಲ ತನ್ನ ಮಡಿಲಿನಲ್ಲಿ ಹಲವಾರು ಶಕ್ತಿ ಕ್ಷೇತ್ರಗಳನ್ನು ಹೊಂದಿದೆ. ಅದರಲ್ಲಿ ಇಡಗುಂಜಿ ವಿನಾಯಕ ದೇವಸ್ಥಾನವೂ ಸಹ ಅತ್ಯಂತ ಶ್ರದ್ದಾ ಕೇಂದ್ರವಾಗಿದ್ದು ಭಕ್ತರ ಇಷ್ಟಾರ್ಥವನ್ನು ಈಡೇರಿಸುವ ಮೂಲಕ ಜನರನ್ನು ತನ್ನತ್ತ ಸೆಳೆಯುತ್ತಿದೆ.
ಕರ್ನಾಟಕದ ಅತ್ಯಂತ ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರ ಮಾತ್ರವಲ್ಲ ಸುಮಾರು 1500 ವರ್ಷಕ್ಕಿಂತಲೂ ಹೆಚ್ಚು ಇತಿಹಾಸ ಹೊಂದಿದ ಇಡಗುಂಜಿ ವಿನಾಯಕ ದೇವಸ್ಥಾನ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ರಾ.ಹೆ. 17 ರಿಂದ 7 ಕಿ.ಮೀ. ದೂರದಲ್ಲಿ ಪೂರ್ವ ದಿಕ್ಕಿನಲ್ಲಿ ಇದೆ.
‘ಮಹೋತಭಾರ ಶ್ರೀ ವಿನಾಯಕ’ ದೇವರು ಎಂದೇ ಕರೆಯಿಸಿಕೊಳ್ಳುವ ಈ ದೇವಸ್ಥಾನದಲ್ಲಿ ವಿನಾಯಕ ಮೂರ್ತಿಯು ನಿಂತಿರುವ “ದ್ವಿ ಭುಜ” ಭಂಗಿಯಲ್ಲಿ ಸುಮಾರು 88 ಸೆಂ.ಮೀ. ಎತ್ತರ ಮತ್ತು 59 ಸೆಂ.ಮೀ. ಅಗಲವನ್ನು ಹೊಂದಿದೆ. ಅಲ್ಲದೇ ಮೂರ್ತಿಯ ಬಲ ಕೈಯಲ್ಲಿ ಕಮಲದ ಹೂ ಮತ್ತು ಎಡ ಕೈಯಲ್ಲಿ ಮೋದಕವನ್ನು ಹೊಂದಿದೆ. ವಿಶೇಷವೆಂದರೆ ಗಣಪತಿಯ ವಾಹನ ಮೂಷಿಕ ಮಾತ್ರ ಮೂರ್ತಿಯ ಪಕ್ಕದಲ್ಲಿಲ್ಲ.
ಹರಕೆ ಹೊತ್ತವರಿಗೆ ಅತೀ ಶೀಘ್ರವಾಗಿ ಭಕ್ತರ ಬೇಡಿಕೆಗಳು ಈಡೇರುತ್ತವೆ ಎಂಬ ನಂಬಿಕೆ ಹೊಂದಿರುವ ಈ ಕ್ಷೇತ್ರಕ್ಕೆ ಪ್ರತಿ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅದರಲ್ಲಿಯೂ ಶ್ರೀ ವಿನಾಯಕನಿಗೆ ಇಷ್ಟವಾದ ಗಣ ಹೋಮವನ್ನು ನೆರವೇರಿಸುವ ಮೂಲಕ ತಮ್ಮ ಮನದಾಳದ ಪ್ರಾರ್ಥನೆ ಸಲ್ಲಿಸುತ್ತಾರೆ. ಹಾಗಾಗಿ ಇಲ್ಲಿಗೆ ಬರುವ ಭಕ್ತರ ಸಂತೃಪ್ತ ಭಾವವೇ ಈ ಶಕ್ತಿ ಕ್ಷೇತ್ರಕ್ಕೆ ಸಾಕ್ಷಿಯಾಗಿದೆ.