ಬ್ಯಾಂಕಿಂಗ್ ನೇಮಕಾತಿಗೆ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ(IBPS) ಪರೀಕ್ಷೆ ನಡೆಸಲಿದ್ದು ಈ ಸಲವೂ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿಲ್ಲ.
ಬ್ಯಾಂಕ್ ಸಿಬ್ಬಂದಿ ಆಯ್ಕೆಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎಲ್ಲಾ ಭಾಷೆಗಳಲ್ಲಿ ನಡೆಸಬೇಕೆಂದು ನಡೆಯುತ್ತಿರುವ ಹೋರಾಟಕ್ಕೆ ಸ್ಪಂದನೆ ದೊರೆತಿಲ್ಲ. 2021 -22 ನೇ ಸಾಲಿನಲ್ಲಿ ಖಾಲಿಯಾಗುವ ಪ್ರೊಬೆಷನರಿ ಅಧಿಕಾರಿಗಳು ಮತ್ತು ಮ್ಯಾನೇಜ್ಮೆಂಟ್ ಟ್ರೈನಿ ಸೇರಿದಂತೆ ವಿವಿಧ ವೃಂದದ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತಿದೆ.
ನವೆಂಬರ್ 28 ರಂದು ಪರೀಕ್ಷೆ ನಡೆಯಲಿದ್ದು, ಡಿಸೆಂಬರ್ ನಲ್ಲಿ ಫಲಿತಾಂಶ ಪ್ರಕಟಿಸಲಾಗುವುದು. 2021 ರ ಜನವರಿಯಲ್ಲಿ ಸಂದರ್ಶನ ನಡೆಯಲಿದೆ. ಐಬಿಪಿಎಸ್ ಪರೀಕ್ಷೆಯಲ್ಲಿ ಪಾಸಾಗುವ ಅಭ್ಯರ್ಥಿಗಳ ಸಂದರ್ಶನವನ್ನು ಆಯಾ ಬ್ಯಾಂಕ್ ಗಳು ನಡೆಸಲಿವೆ.
ಈ ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆಯನ್ನು ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಬರೆಯಲು ಅವಕಾಶ ನೀಡಲಾಗಿತ್ತು. ಮುಖ್ಯ ಪರೀಕ್ಷೆಯನ್ನು ಹಿಂದಿಯೇತರ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಬೇಕೆಂದು ಹೋರಾಟ ನಡೆಸಲಾಗಿತ್ತು. ಐಬಿಪಿಎಸ್ ಇದಕ್ಕೆ ಸ್ಪಂದಿಸಿಲ್ಲ. ಹಿಂದಿಯೇತರ ರಾಜ್ಯಗಳ ಅಭ್ಯರ್ಥಿಗಳು ಇಂಗ್ಲೀಷ್ ಅಥವಾ ಹಿಂದಿಯಲ್ಲಿ ಮುಖ್ಯ ಪರೀಕ್ಷೆ ಬರೆಯಬೇಕಿದೆ ಎಂದು ಹೇಳಲಾಗಿದೆ.
ಈ ಹಿಂದೆ ಕೇಂದ್ರ ಸರ್ಕಾರ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಗಳನ್ನು 13 ಭಾರತೀಯ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಿತ್ತು. ದೇಶದ ವಿವಿಧ ಸಂಘಟನೆಗಳು ಹಿಂದಿಯೇತರ ಭಾಷೆಗಳಲ್ಲೂ ರಾಷ್ಟ್ರೀಕೃತ ಬ್ಯಾಂಕುಗಳ ಪರೀಕ್ಷೆಯನ್ನು ಬರೆಯಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದರು. ಆದರೆ ಈ ಬಾರಿಯೂ ಕನ್ನಡ ಸೇರಿ ಆಯಾ ರಾಜ್ಯ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದು ಹೇಳಲಾಗಿದೆ.