40 ವರ್ಷಗಳ ಹಿಂದೆ ಖ್ಯಾತ ಗಣಿತ ಶಾಸ್ತ್ರಜ್ಞೆ ಮಾಡಿದ ವಿಶ್ವ ದಾಖಲೆ ಈಗ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರಿದೆ.
ಮಾನವ ಕಂಪ್ಯೂಟರ್ ಎಂದೇ ಹೆಸರಾಗಿದ್ದ ಶಕುಂತಲಾ ದೇವಿ ಅವರಿಗೆ ಗುರುವಾರ ಗಿನ್ನಿಸ್ ವಿಶ್ವ ದಾಖಲೆಯ ಪ್ರಮಾಣಪತ್ರವನ್ನು ಮರಣೋತ್ತರವಾಗಿ ನೀಡಲಾಯಿತು. ಅವರು ಯುನೈಟೆಡ್ ಕಿಂಗ್ ಡಮ್ ನ ಲಂಡನ್ ಇಂಪೀರಿಯಲ್ ಕಾಲೇಜ್ ನಲ್ಲಿ ಓದುವಾಗ 1980 ಜೂನ್ 18 ರಂದು ಕೇವಲ 28 ಸೆಕೆಂಡ್ ಗಳಲ್ಲಿ 13 ಅಂಕೆಗಳ ಎರಡು ಲೆಕ್ಕವನ್ನು ಗುಣಿಸಿ ದಾಖಲೆ ಬರೆದಿದ್ದರು.
ಗುರುವಾರ ಖ್ಯಾತ ಗಣಿತ ತಜ್ಞೆಯ ಮಗಳು ಅನುಪಮಾ ಬ್ಯಾನರ್ಜಿ ತಮ್ಮ ಮೃತ ತಾಯಿಯ ಪರವಾಗಿ ವಿಶ್ವ ದಾಖಲೆಯ ಪ್ರಮಾಣಪತ್ರ ಪಡೆದರು. ಅನುಪಮಾ 10 ವರ್ಷದವರಿದ್ದಾಗ ಆಕೆಯ ತಾಯಿ ದಾಖಲೆ ಮಾಡಿದ್ದರು.
“ನಾನು ಯಾವಾಗ ಹೊರಗೆ ಹೋದರೂ ಜನ ನನ್ನ ತಾಯಿಯ ಸಾಧನೆಯ ಬಗ್ಗೆ ಮಾತನಾಡುತ್ತಿದ್ದರು. ಅದೊಂದು ವಿಶ್ವದ ಅತಿ ದೊಡ್ಡ ಸಾಧನೆ ಎಂದು ನನಗೆ ಈಗೀಗ ಅರ್ಥವಾಗಿದೆ. ಲಂಡನ್ ನ ಕನ್ವರ್ಟಿ ಸ್ಟ್ರೀಟ್ ನಲ್ಲಿರುವ ಟ್ರೊಕ್ಯಾಡೆರೊ ಸೆಂಟರ್ ಎಂಬ ಮನೋರಂಜನಾ ಸ್ಥಳದಲ್ಲಿ ನನ್ನ ತಾಯಿಯ ಫೋಟೋ ಹಾಕಿದ್ದು ನೋಡಿ ನನಗೆ ಹೆಮ್ಮೆ ಎನಿಸಿತ್ತು” ಎಂದು ಅನುಪಮಾ ಹೇಳಿಕೊಂಡಿದ್ದಾರೆ.
ಇಷ್ಟೇ ಅಲ್ಲ ಶಕುಂತಲಾ ದೇವಿ ಜೀವನ ಚರಿತ್ರೆ ಚಿತ್ರ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಶುಕ್ರವಾರ ಬಿಡುಗಡೆಯಾಗಿದೆ. ವಿದ್ಯಾ ಬಾಲನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅನು ಮೆನನ್ ನಿರ್ದೇಶನ ಮಾಡಿದ್ದಾರೆ. “ಶಕುಂತಲಾ ದೇವಿ ಚಿತ್ರದ ಶೂಟಿಂಗ್ ಗಾಗಿ ಲಂಡನ್ ಗೆ ಹೋಗಿದ್ದೆ. ಅಲ್ಲಿ ಅನುಪಮಾ ಅವರ ಜತೆಗೆ ಮಾತನಾಡುವಾಗ ಶಕುಂತಲಾ ಅವರು ಗಿನ್ನೆಸ್ ರೆಕಾರ್ಡ್ ನ ಅಧಿಕೃತ ದಾಖಲೆ ಹೊಂದಿಲ್ಲ ಎಂಬುದು ನನಗೆ ತಿಳಿಯಿತು” ಎಂದು ವಿದ್ಯಾ ಬಾಲನ್ ಹೇಳಿಕೊಂಡಿದ್ದಾರೆ.
ನಂತರ ಚಿತ್ರ ನಿರ್ಮಾಪಕ ವಿಕ್ರಮ್ ಮಲ್ಹೋತ್ರಾ ಹಾಗೂ ವಿದ್ಯಾ ಬಾಲನ್ ಅವರು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಬುಕ್ ಸಂಸ್ಥೆಯನ್ನು ಸಂಪರ್ಕಿಸಿ ಅಧಿಕೃತ ದಾಖಲೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. “ಇಷ್ಟು ವರ್ಷಗಳ ನಂತರವೂ ಶಕುಂತಲಾ ದೇವಿ ಅವರ ದಾಖಲೆಯನ್ನು ಯಾರೂ ಮುರಿಯಲು ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿಯ ಸಂಗತಿ” ಎಂದು ಗಿನ್ನೆಸ್ ವಿಶ್ವ ದಾಖಲೆ ಪುಸ್ತಕದ ಪ್ರಧಾನ ಸಂಪಾದಕ ಕ್ರೆಂಗ್ ಗ್ಲೆಂಡಿ ಹೇಳಿದ್ದಾರೆ.