ಹುಬ್ಬಳ್ಳಿ: ಈರುಳ್ಳಿ ದರ ಏರಿಕೆಯ ಹಾದಿಯಲ್ಲಿ ಸಾಗುತ್ತಿದ್ದು, 100 ರೂಪಾಯಿ ಗಡಿ ದಾಟತೊಡಗಿದೆ. ಬೇಡಿಕೆ ಹೆಚ್ಚಾಗಿದ್ದು ಪೂರೈಕೆಯಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಳವಾಗಿದೆ.
ಹುಬ್ಬಳ್ಳಿಯ ಅಮರಗೋಳ ಎಪಿಎಂಸಿಗೆ ಶೇಕಡ 80ರಷ್ಟು ಈರುಳ್ಳಿ ಪೂರೈಕೆ ಕಡಿಮೆಯಾಗಿ ಬೆಲೆ 100 ರೂಪಾಯಿ ದಾಟುವತ್ತ ದಾಪುಗಾಲಿಟ್ಟಿದೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಪ್ರತಿದಿನ 8 ರಿಂದ 10 ಸಾವಿರ ಕ್ವಿಂಟಾಲ್ ಈರುಳ್ಳಿ ಮಾರುಕಟ್ಟೆಗೆ ಮಾರಾಟಕ್ಕೆ ತರಲಾಗುತ್ತಿತ್ತು. ಈಗ ಸುಮಾರು 3 ಸಾವಿರ ಕ್ವಿಂಟಾಲ್ ನಷ್ಟು ಈರುಳ್ಳಿ ಬರುತ್ತಿದೆ.
ಭಾರಿ ಮಳೆ, ನೆರೆಹಾನಿಯ ಕಾರಣ ಹೊಲದಲ್ಲಿಯೇ ಬೆಳೆ ಹಾಳಾಗಿದೆ. ಸ್ವಲ್ಪ ಪ್ರಮಾಣದ ಈರುಳ್ಳಿ ಕೈಗೆ ಸಿಕ್ಕಿದ್ದು ರೈತರು ಅದನ್ನು ಸಂತೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಎಪಿಎಂಸಿಗೆ ಈರುಳ್ಳಿ ಮಾರಾಟಕ್ಕೆ ಬರುತ್ತಿಲ್ಲ. ಹೊರಗಿನಿಂದಲೂ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಇದರ ಪರಿಣಾಮ ಈರುಳ್ಳಿ ದರ ಏರಿಕೆಯಾಗತೊಡಗಿದೆ ಎಂದು ಹೇಳಲಾಗಿದೆ.