2004ರ ಡಿಸೆಂಬರ್‌ನಲ್ಲಿ ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಇಂಡೋನೇಷ್ಯಾಗಳಿಗೆ ಅಪ್ಪಳಿಸಿದ್ದ ಸುನಾಮಿ ದೊಡ್ಡ ಮಟ್ಟದಲ್ಲಿ ಪ್ರಾಣ ಹಾನಿ ಮಾಡಿತ್ತು.
ಇಂಥ ಸುನಾಮಿ ಅಪ್ಪಳಿಸಿದ ಸಂದರ್ಭದಲ್ಲಿ ಚೆನ್ನೈನಲ್ಲಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ, ತಾವು ಹೇಗೆ ಈ ವಿಕೋಪದಿಂದ ಸ್ಪಲ್ಪದರಲ್ಲೇ ಪಾರಾದೆ ಎಂಬುದನ್ನು ತಿಳಿಸಿದ್ದಾರೆ.
ಅದೇ ದಿನ ಬೆಳಿಗ್ಗೆ 11:30ಕ್ಕೆ ಬೆಂಗಳೂರಿನ ವಿಮಾನವನ್ನೇರಿದ್ದ ಕುಂಬ್ಳೆ, ಆ ದುರಂತದಿಂದ ಪಾರಾಗಿದ್ದರು.
ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಜೊತೆಗಿನ ಆನ್ಲೈನ್ ವಿಡಿಯೋ ಕಾಲ್ ಒಂದರಲ್ಲಿ ತಮ್ಮ ಆ ದಿನದ ಕಥೆಯನ್ನು ಹಂಚಿಕೊಂಡಿದ್ದಾರೆ ಕುಂಬ್ಳೆ.
“ಚೆನ್ನೈನ ಫಿಶರ್‌ಮನ್ಸ್ ಕೋವ್ ಬಳಿ ನಾವು ಇದ್ದೆವು. ನಾನು ನನ್ನ ಮಡದಿ ಹಾಗೂ ಮಗ ಮೂರೇ ಜನರು ಅಲ್ಲಿದ್ದೆವು. ನನ್ನ ಮಗನಿಗೆ ಆಗ ಬರೀ 10 ತಿಂಗಳ ಪ್ರಾಯ. ಮತ್ತೆ ಬೆಂಗಳೂರಿಗೆ ಬರಲು ರಸ್ತೆ ಮಾರ್ಗ ಹಿಡಿಯುವುದಾದರೆ ಆರು ಗಂಟೆಗಳನ್ನು ತೆಗೆದುಕೊಳ್ಳುವ ಕಾರಣ, ನಾವು ವಿಮಾನದಲ್ಲೇ ಮರಳಲು ಇಚ್ಛಿಸಿದ್ದೆವು. ಸುನಾಮಿ ಬಂದು ಅಪ್ಪಳಿಸಿದ ದಿನವೇ ನಮ್ಮ ಹಾಲಿಡೇ ಕಾರ್ಯಕ್ರಮ ಮುಗಿದಿತ್ತು. 11:30ಕ್ಕೆ ಫ್ಲೈಟ್ ಇದ್ದ ಕಾರಣದಿಂದ ನಾವು 9:30ಕ್ಕೆ ಆ ಹೊಟೇಲ್‌ನಿಂದ ಹೊರಟಿದ್ದೆವು.
ಅದು ಹೇಗೋ, ನನ್ನ ಮಡದಿಗೆ ರಾತ್ರಿಯಿಡೀ ನಿದ್ರೆ ಬರದೇ, ’ಸಮಯ ಎಷ್ಟಾಗಿದೆ ನೋಡಿ. ನನಗೆ ಯಾಕೋ ಎಲ್ಲವೂ ಸರಿ ಇದೆ ಅನಿಸುತ್ತಿಲ್ಲ’ ಎಂದರು. ಅವರು ಬೆಳಿಗ್ಗೆ ಬೇಗ ಎದ್ದಿದ್ದರು. ಸಮುದ್ರವನ್ನು ನೋಡಿಕೊಂಡು ಹಾಗೇ ಕಾಫಿಯನ್ನು ಹೀರಿದೆವು. ಮೋಡ ಕವಿದಿತ್ತು, ಎಲ್ಲವೂ ಶಾಂತಮಯವಾಗಿತ್ತು.
ಬೆಳಿಗ್ಗೆ 8:30ರ ವೇಳೆಗೆ ನಾವು ಬೆಳಗಿನ ಉಪಹಾರ ಸವಿಯಲೆಂದು ಹೊರಟೆವು. ಆ ಜಾಗ ಸ್ವಲ್ಪ ಎತ್ತರದಲ್ಲಿದೆ. ಸುನಾಮಿಯ ಮೊದಲ ಅಲೆ ಅಪ್ಪಳಿದಾಗ ನಾವು ಉಪಹಾರ ಸೇವಿಸುತ್ತಿದ್ದೆವು. ಏನಾಗುತ್ತಿದೆ ಎಂದು ನನ್ನ ಅರಿವಿಗೂ ಬಂದಿರಲಿಲ್ಲ. ಸ್ನಾನದ ಧಿರಿಸಿನಲ್ಲಿದ್ದ ಯುವ ದಂಪತಿಗಳು ಪೂರ್ಣ ನೆನೆದುಬಿಟ್ಟಿದ್ದಲ್ಲದೇ ನಡಗುತ್ತಿದ್ದರು.
ಏನಾಗುತ್ತಿದೆ ಎಂದು ನನ್ನ ಅರಿವಿಗೆ ಬರುತ್ತಲೇ ಇರಲಿಲ್ಲ. ನಾವು ವಿಮಾನ ನಿಲ್ದಾಣದತ್ತ ಹೊರಡಲು ಕಾರಿನಲ್ಲಿ ಕುಳಿತಾಗ, ಫಿಶರ್‌ಮನ್ ಕೋವ್ ಬಳಿ ಇರುವ ಸೇತುವೆಗೆ ಬಹಳ ಸನಿಹದಲ್ಲಿ ನೊರೆಯುಕ್ತ ನೀರಿದ್ದು, ನಾನು ಅದನ್ನು ಮುಟ್ಟಬಹುದಾಗಿತ್ತು. ಇದೇ ವೇಳೆ ಸಿನೆಮಾದಲ್ಲಿ ನೋಡುವಂತೆ ಜನರು ಸಿಕ್ಕಾಪಟ್ಟೆ ಗಾಬರಿಯಾಗಿ ದಿಕ್ಕಾಪಾಲಾಗಿ ಓಡುತ್ತಿರುವುದನ್ನು ಕಂಡೆವು. ನಮ್ಮ ಕಾರಿನ ಚಾಲಕನಿಗೆ ಸುನಾಮಿ ಬಗ್ಗೆ ಪದೇ ಪದೇ ಕರೆಗಳು ಬರುತ್ತಲೇ ಇದ್ದವು. ಎಲ್ಲಾ ಕಡೆ ನೀರು ಬಂದುಬಿಟ್ಟಿದೆ ಎಂದು ಆತ ಹೇಳಿದಾಗ ನಾನು ನಂಬಲೇ ಇಲ್ಲ. ಸುನಾಮಿ ಬಗ್ಗೆ ನಾನು ಆ ಮುಂಚೆ ಕೇಳಿರಲಿಲ್ಲ. ಏನಾಗುತ್ತಿದೆ ಎಂದು ನಮ್ಮ ಅರಿವಿಗೆ ಬರುತ್ತಿರಲಿಲ್ಲ. ಬೆಂಗಳೂರಿಗೆ ಮರಳಿ ಟಿವಿ ಹಾಕಿದಾಗ ನನಗೆ ಗೊತ್ತಾಯಿತು ಸುನಾಮಿ ಅಪ್ಪಳಿಸಿದೆ ಎಂದು” ಎಂದು ಕುಂಬ್ಳೆ ಬಹಳ ಸವಿವರವಾಗಿ ಆ ದಿನದ ಚಿತ್ರಣವನ್ನು ವಿವರಿಸಿದ್ದಾರೆ.