ಬೆಂಗಳೂರು: ಭಾರಿ ಮಳೆಯಿಂದ ಮನೆ ಹಾನಿಗೀಡಾದಲ್ಲಿ 5 ಲಕ್ಷ ರೂ. ಪರಿಹಾರ ನೀಡಲು ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
NDRF, SDRF ಮಾರ್ಗಸೂಚಿಯನ್ವಯ ಪರಿಹಾರ ನೀಡಿದರೆ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಒಂದು ಲಕ್ಷ ರೂಪಾಯಿ ನೀಡಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ಘೋಷಿಸಿದ್ದು ಅತಿವೃಷ್ಟಿಯಲ್ಲಿ ಮನೆ ಕಳೆದುಕೊಂಡವರಿಗೆ 5ದು ಲಕ್ಷ ರೂಪಾಯಿ ಪರಿಹಾರ ನೀಡಲಿದೆ.
2020 ರ ಆಗಸ್ಟ್ ನಿಂದ ಸೆಪ್ಟೆಂಬರ್ ವರೆಗೆ ಪ್ರವಾಹದಿಂದ ತೊಂದರೆಗೊಳಗಾದ ಗ್ರಾಮಗಳ ಸಂತ್ರಸ್ತರ ಬಟ್ಟೆ, ದಿನಬಳಕೆಯ ವಸ್ತುಗಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಪ್ರತಿ ಕುಟುಂಬಕ್ಕೆ 3800 ರೂ. ಜೊತೆಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ 6200 ರೂಪಾಯಿ ಸೇರಿಸಿ ಒಟ್ಟು 10 ಸಾವಿರ ರೂ. ಪರಿಹಾರ ನೀಡಲಾಗುವುದು.
ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ, ಶೇಕಡ 75 ಕ್ಕಿಂತ ಹೆಚ್ಚು ಹಾನಿಗೊಳಗಾದ ಮನೆಗಳಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಶೇಕಡ 25ರಿಂದ ಶೇಕಡ 75ರಷ್ಟು ಹಾನಿಗೊಳಗಾದ ಮನೆಯನ್ನು ಬೀಳಿಸಿ ಹೊಸ ಮನೆ ನಿರ್ಮಿಸಲು 5 ಲಕ್ಷ ರೂ., ಶೇಕಡ 25 ರಿಂದ ಶೇಕಡ 75 ರವರೆಗಿನ ಮನೆ ಹಾನಿಗೆ 3 ಲಕ್ಷ ರೂಪಾಯಿ, ಶೇಕಡ 15 ರಿಂದ ಶೇಕಡ 25 ರಷ್ಟು ಹಾನಿಯಾದ ಮನೆಗೆ 50 ಸಾವಿರ ರೂಪಾಯಿ ನೀಡಲಾಗುತ್ತದೆ ಎಂದು ಹೇಳಲಾಗಿದೆ.