ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಪರಿಚಯವಾದ ಯುವತಿಯೊಂದಿಗೆ ಸುತ್ತಾಡಿದ ವೈದ್ಯ ಹನಿಟ್ರ್ಯಾಪ್ ಸಂಕಷ್ಟಕ್ಕೆ ಸಿಲುಕಿದ್ದಾರೆ.
10 ಲಕ್ಷ ರೂಪಾಯಿ ಕೊಡುವಂತೆ ವೈದ್ಯನಿಗೆ ಬ್ಲಾಕ್ಮೇಲ್ ಮಾಡಲಾಗಿದ್ದು 5,000 ರೂ. ದೋಚಲಾಗಿದೆ. ಬೆಂಗಳೂರು ಯಲಹಂಕ ಪ್ರಕೃತಿ ನಗರ ನಿವಾಸಿಯಾಗಿರುವ 40 ವರ್ಷದ ವೈದ್ಯನಿಗೆ 22 ವರ್ಷದ ಯುವತಿ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದಳು. ಇಬ್ಬರ ನಡುವಿನ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಜೂನ್ 13ರಂದು ಕರೆ ಮಾಡಿದ ಯುವತಿ ಹೊರಗೆ ಹೋಗೋಣ ಎಂದು ಪುಸಲಾಯಿಸಿದ್ದಾಳೆ.
ಏರ್ಪೋರ್ಟ್ ರಸ್ತೆಯಲ್ಲಿರುವ ಹೋಟೆಲ್ ಗೆ ಹೋಗಿ ಊಟ ಮಾಡಿ ರಾತ್ರಿ 11 ಗಂಟೆಗೆ ಯುವತಿಯನ್ನು ಯಲಹಂಕದ ತಮ್ಮ ನಿವಾಸಕ್ಕೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಇಬ್ಬರು ಯುವಕರು ದಿಢೀರ್ ಅವರ ಮನೆಗೆ ನುಗ್ಗಿ ತಾವು ಇಂಟಲಿಜನ್ಸ್ ಪೊಲೀಸರು ಎಂದು ಹೇಳಿಕೊಂಡಿದ್ದಾರೆ.
ಯುವತಿಯೊಂದಿಗೆ ಇರುವ ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದಿದ್ದು 10 ಲಕ್ಷ ರೂಪಾಯಿ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದಾರೆ. ಬಳಿಕ ವೈದ್ಯರ ಜೇಬಿನಲ್ಲಿದ್ದ 5000 ರೂ. ದೋಚಿ ಪರಾರಿಯಾಗಿದ್ದಾರೆ.
ಹೇಳಿದ ಸ್ಥಳಕ್ಕೆ ಹಣ ತಂದುಕೊಡಬೇಕು ಎಂದು ಯುವತಿ ಹಾಗೂ ಇಬ್ಬರು ಯುವಕರು ಬೆದರಿಕೆ ಹಾಕಿ ತೆರಳಿದ್ದು ಕಂಗಾಲಾದ ವೈದ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿ ಹಾಗೂ ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.