ಬೆಂಗಳೂರು: ಒಂದರಿಂದ 5ನೇ ತರಗತಿಯವರೆಗೆ ಆನ್ಲೈನ್ ಶಿಕ್ಷಣ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಗರಂ ಆಗಿದೆ.
ಹೈಕೋರ್ಟ್ ನಲ್ಲಿ ಸರ್ಕಾರದ ಕ್ರಮ ಪ್ರಶ್ನಿಸಿದ ಅರ್ಜಿಯ ವಿಚಾರಣೆ ನಡೆಸಲಾಗಿದೆ. ಕೆಲವು ಪೋಷಕರು, ಶಿಕ್ಷಣ ಸಂಸ್ಥೆಗಳು ಹೈಕೋರ್ಟ್ ಗೆ ಸರ್ಕಾರದ ವಿರುದ್ಧ ಅರ್ಜಿ ಸಲ್ಲಿಕೆ ಮಾಡಿದ್ದವು. ಆನ್ಲೈನ್ ಶಿಕ್ಷಣಕ್ಕೆ ಹಲವು ಪೋಷಕರು ಸಮ್ಮತಿ ನೀಡಿದ್ದಾರೆ. ಹೀಗಾಗಿ ಸರ್ಕಾರದ ಆದೇಶ ರದ್ದು ಪಡಿಸಬೇಕೆಂದು ಅರ್ಜಿ ಸಲ್ಲಿಕೆ ಮಾಡಲಾಗಿತ್ತು.
ಆನ್ಲೈನ್ ಶಿಕ್ಷಣ ಕುರಿತು ತಜ್ಞರ ಸಮಿತಿ ರಚಿಸಲಾಗಿದೆ ಎಂದು ಹೈಕೋರ್ಟ್ಗೆ ರಾಜ್ಯ ಸರ್ಕಾರದ ಪರ ವಕೀಲರು ಮಾಹಿತಿ ನೀಡಿದ್ದಾರೆ. ಆನ್ಲೈನ್ ಶಿಕ್ಷಣ ನಿಷೇಧಿಸಿದ ನಂತರ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ತಜ್ಞರ ಅಭಿಪ್ರಾಯ ಪಡೆಯದೆ ಆನ್ಲೈನ್ ಶಿಕ್ಷಣವನ್ನು ನಿಷೇಧಿಸಲಾಗಿದೆ. ಪೋಷಕರು ಬಯಸಿದರೆ ಸರ್ಕಾರ ಏಕೆ ನಿಷೇಧ ಹೇರಬೇಕು ಎಂದು ಕೋರ್ಟ್ ಪ್ರಶ್ನಿಸಿದೆ. ಸರ್ಕಾರದ ನಡೆಗೆ ಹೈಕೋರ್ಟ್ ವಿಭಾಗೀಯ ಪೀಠ ಗರಂ ಆಗಿದ್ದು, ಈ ಬಗ್ಗೆ ಮರುಪರಿಶೀಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ ಎನ್ನಲಾಗಿದೆ.