ಬೆಂಗಳೂರು: ನವೆಂಬರ್ ನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯ ಚುನಾವಣಾ ಆಯೋಗದ ವತಿಯಿಂದ ಹೈಕೋರ್ಟ್ಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ.
ಅವಧಿ ಪೂರ್ಣಗೊಂಡ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಚುನಾವಣೆ ಆಯೋಗ ಮತ್ತು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕಾಂಗ್ರೆಸ್ ಮುಖಂಡ ಕೆ.ಸಿ. ಕೊಂಡಯ್ಯ ಮೊದಲಾದವರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆದಿದೆ.
ಚುನಾವಣೆ ಆಯೋಗದ ಪರ ಹಿರಿಯ ವಕೀಲ ಕೆ.ಎಂ. ಫಣೀಂದ್ರ ಈ ಕುರಿತು ಮಾಹಿತಿ ನೀಡಿ, ನವೆಂಬರ್ ನಲ್ಲಿ ಚುನಾವಣೆ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಸರ್ಕಾರದ ಪರ ವಕೀಲರು, ಚುನಾವಣೆ ನಡೆಸಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು ಅಡ್ವೊಕೇಟ್ ಜನರಲ್ ವಾದ ಮಂಡಿಸಲಿದ್ದಾರೆ. ಅದಕ್ಕೆ ಕಾಲಾಕಾಶ ಬೇಕಿದೆ ಎಂದು ತಿಳಿಸಿದ್ದಾರೆ.
ಕೊರೋನಾ ಸೋಂಕು ಕಡಿಮೆ ಇರುವ ಪ್ರದೇಶದಲ್ಲಿ ಚುನಾವಣೆ ನಡೆಸುವ ಕುರಿತು ವಿಚಾರಣೆ ವೇಳೆ ಚರ್ಚೆ ನಡೆದಿದೆ. ಎರಡು ಹಂತದಲ್ಲಿ ಚುನಾವಣೆ ನಡೆಸಲಾಗುವುದು ಎಂದು ಆಯೋಗದ ಪರ ವಕೀಲರು ಹೇಳಿದ್ದು ವಿಚಾರಣೆಯನ್ನು ಅಕ್ಟೋಬರ್ 23 ಕ್ಕೆ ಮುಂದೂಡಲಾಗಿದೆ ಎಂದು ಹೇಳಲಾಗಿದೆ.