ಚಾಮರಾಜನಗರದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ 24 ಮಂದಿ ಸಾವನ್ನಪ್ಪಿದ ಪ್ರಕರಣ ಸಂಬಂಧ ರಾಜ್ಯ ಹೈಕೋರ್ಟ್ ಕೇಂದ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದೆ.
ಅಲ್ಲದೇ ಇದೇ ವೇಳೆ ಕೇಂದ್ರ ಸರ್ಕಾರದ ಪರ ವಕೀಲರ ವಿರುದ್ಧ ನ್ಯಾಯಪೀಠ ಆಕ್ರೋಶ ಹೊರಹಾಕಿದೆ .ಕರ್ನಾಟಕಕ್ಕೆ ನೀವು ಆಮ್ಲಜನಕ ಪೂರೈಕೆಯನ್ನ ಹೆಚ್ಚಿಸುತ್ತೀರೋ ಇಲ್ಲವೋ..? ಇನ್ನೂ ಎಷ್ಟು ಮಂದಿ ಆಮ್ಲಜನಕದ ಅಭಾವದಿಂದ ಸಾವನಪ್ಪಬೇಕು…? ಸೋಂಕು ಕಡಿಮೆ ಇರುವ ರಾಜ್ಯಕ್ಕೆ ಹೆಚ್ಚಿನ ಆಮ್ಲಜನಕವನ್ನ ಪೂರೈಸಿದ್ದೀರಾ. ಆದರೆ ರಾಜ್ಯದಲ್ಲಿ ಜನರು ಸಾಯುತ್ತಿದ್ದಾರೆ. ಚಾಮರಾಜನಗರ, ಕಲಬುರ್ಗಿಯ ಘಟನೆಗಳನ್ನ ನೋಡಿದ ಬಳಿಕವಾದರೂ ನಿಮ್ಮ ನಿರ್ಧಾರವನ್ನ ಬದಲಿಸಿ ಎಂದು ಹೇಳಿದೆ.
ಹೈಕೋರ್ಟ್ನ ಈ ಪ್ರಶ್ನೆಗೆ ಪ್ರತ್ಯುತ್ತರ ನೀಡಿದ ಕೇಂದ್ರ ಸರ್ಕಾರದ ಪರ ವಕೀಲ ಕ್ಲಿಫ್ಟನ್ ರೊಜಾರಿಯೋ ಸಭೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬರಬೇಕಾದ ಹಿನ್ನೆಲೆ ನಾಳೆ ಮಧ್ಯಾಹ್ನದವರೆಗೂ ಕಾಲಾವಕಾಶ ಕೇಳಿದ್ದಾರೆ. ಅಲ್ಲದೇ ರಾಜ್ಯದ 10 ಆಸ್ಪತ್ರೆಗಳು ಆಮ್ಲಜನಕದ ಅಭಾವದ ಕುರಿತಂತೆ ಸರ್ಕಾರಕ್ಕೆ ಪತ್ರ ಬರೆದಿವೆ ಎಂದು ಕೋರ್ಟ್ಗೆ ಮಾಹಿತಿ ನೀಡಿದ್ದಾರೆ.