ಕಲಬುರಗಿ: ಪ್ರಸಕ್ತ 2020-21ನೇ ಸಾಲಿನಲ್ಲಿ ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯಡಿ ವಿದ್ಯುತ್‍ಮಗ್ಗ ಚಟುವಟಿಕೆ ಕೈಗೊಳ್ಳಲು ಉದ್ದೇಶಿಸಿರುವ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುತ್ತಿದೆ.
ಇದಕ್ಕಾಗಿ ಆಸಕ್ತ ಫಲಾನುಭವಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಘಟಕದ ವೆಚ್ಚ 3 ಲಕ್ಷ ರೂ. ಗಳಾಗಿದ್ದು, ಈ ಮೊತ್ತವನ್ನು ಹಣಕಾಸು ಸಂಸ್ಥೆಗಳಿಂದ (ಬ್ಯಾಂಕ್) ಸಾಲ ಪಡೆದು ನಂತರ ಯಂತ್ರೋಪಕರಣಗಳನ್ನು ಖರೀದಿಸಿ ಅಳವಡಿಸಿ ಉತ್ಪಾದನೆ ಪ್ರಾರಂಭಿಸಿದ ನಂತರ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇ.90 ರಷ್ಟು ಸಹಾಯಧನವನ್ನು ಸಂಬಂಧಪಟ್ಟ ಸಾಲ ನೀಡಿದ ಬ್ಯಾಂಕುಗಳಿಗೆ ಆರ್.ಟಿ.ಜಿ.ಎಸ್. ಮೂಲಕ ಜಮಾ ಮಾಡಲಾಗುತ್ತದೆ.
ಸೀವಿಂಗ್ ಮಶೀನ್ ಖರೀದಿಗೆ ಸಹಾಯಧನ:
ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯ ನಿಧಿ ಯೋಜಯಡಿ ಸೀವಿಂಗ್ ಮಶೀನ್ ಖರೀದಿಗೆ ಶೇ.50 ರಷ್ಟು ಸಹಾಯಧನ ನೀಡಲಾಗುತ್ತಿದೆ. ಇಲಾಖೆಯಿಂದ ಸೀವಿಂಗ್ ಮಶೀನ್ ಆಪರೇಟರ್ ತರಬೇತಿ ಪಡೆದ ಮಹಿಳಾ ಅಭ್ಯರ್ಥಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ನಿಧಿ ಯೋಜನೆ ಜಾರಿಗೊಳಿಸಲಾಗಿದ್ದು, ಈ ಯೋಜನೆಯಡಿ ಒಂದು ಇಂಡಸ್ಟ್ರೀಯಲ್ ಸೀವಿಂಗ್ ಮಷಿನ್ ಘಟಕದ ವೆಚ್ಚ 30,000 ರೂ. ಗಳಾಗಿರುತ್ತದೆ. ಇದಕ್ಕೆ ಸರ್ಕಾರವು ಶೇ 50 ರಷ್ಟು ಗರಿಷ್ಟ 15,000 ರೂ. ಗಳ ಸಹಾಯಧನ ಪಡೆಯಬಹುದಾಗಿದೆ.
ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಎರಡನೇ ಮಹಡಿ, ಕೊಠಡಿ ಸಂಖ್ಯೆ 15, ಮಿನಿವಿಧಾನ ಸೌಧ, ಕಲಬುರಗಿ-585102 ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-278629 ಗೆ ಸಂಪರ್ಕಿಸಲು ಕೋರಲಾಗಿದೆ.