ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಕೊಡಗಿನಲ್ಲಿ ಮಳೆ ಆರ್ಭಟ ಮುಂದುವರೆದಿದ್ದು ಬ್ರಹ್ಮಗಿರಿ ಬೆಟ್ಟ ಕುಸಿದು ಅರ್ಚಕರ ಕುಟುಂಬ ನಾಪತ್ತೆಯಾಗಿದೆ. ಅದೇ ರೀತಿ ಮಡಿಕೇರಿ ತಾಲ್ಲೂಕಿನ ಬೊಟ್ಲಪ್ಪ ಗ್ರಾಮದ ಬಳಿ ಭೂಕುಸಿತವಾಗಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದಲ್ಲಿ ಮನೆಗಳಿಗೆ ನೀರು ನೀರು ನುಗ್ಗಿದ್ದು, ಸ್ತಳೀಯ ನಿವಾಸಿಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದೆ. ಹಲವು ಗ್ರಾಮಗಳ ಸಂಪರ್ಕ ಕಡಿತವಾಗುವ ಆತಂಕ ಎದುರಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಶೃಂಗೇರಿಯಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಚಾರ್ಮಡಿ ಘಾಟ್ ಆಲೇಖಾನ್ ಬಳಿ ಮತ್ತೆ ಕುಸಿತವಾಗಿದ್ದರಿಂದ ರಸ್ತೆಗೆ ಕಲ್ಲು ಬಂಡೆ, ಮಣ್ನು, ಮರ ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ.
ಶಿವಮೊಗ್ಗದಲ್ಲಿ ಕೆರೆಗಳು ಕೋಡಿಬಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಅನೇಕ ಕಡೆ ಜಮೀನು ತೋಟಗಳಿಗೆ ನೀರು ನುಗ್ಗಿ ಭಾರೀ ಹಾನಿಯಾಗಿದೆ. ರಾಯಚೂರು, ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ನದಿಗಳು ತುಂಬಿ ಹರಿಯುತ್ತಿವೆ. ಹಲವು ಸೇತುವೆ ಮುಳುಗಡೆಯಾಗಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಹಾನುಬಾಳು ಸಮೀಪ ನದಿಯಲ್ಲಿ ಜೀಪ್ ಸಮೇತ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ಧಾರವಾಡ, ಹುಬ್ಬಳ್ಳಿಯಲ್ಲಿ ಭಾರಿ ಮಳೆಯಾಗುತ್ತಿದ್ದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.