ಕಾರವಾರ: ಕರಾವಳಿ ಜಿಲ್ಲೆಗಳಲ್ಲಿ ಮಹಾಮಳೆಯಿಂದಾಗಿ ಅವಾಂತರಗಳು ಸಂಭವಿಸುತ್ತಿವೆ. ಹಲವೆಡೆ ಮನೆ ಗೋಡೆಗಳು, ವಿದ್ಯುತ್ ಕಂಬಗಳು ಧರಾಶಾಹಿಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದಿದೆ.
ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಹೊನ್ನಾವರದ ಭಾಸ್ಕೇರಿ ಬಳಿ ರಸ್ತೆ ಮೇಲೆ ಗುಡ್ಡ ಕುಸಿದಿದ್ದು, ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಗುಡ್ಡ ಕುಸಿದ ಪರಿಣಾಮ ರಸ್ತೆಗೆ ಮಣ್ಣು, ಬಂಡೆಗಳು ಉರುಳಿದ್ದು ಕಾರವಾರ-ಬೆಂಗಳೂರು ತೆರಳುವ ವಾಹನ ಸವಾರರಿಗೆ ಸಮಸ್ಯೆಯುಂಟಾಗಿದೆ.
ಅಲ್ಲದೇ ಹೊನ್ನಾವರ-ಸಾಗರ-ಶಿವಮೊಗ್ಗ ಮಾರ್ಗವೂ ಸಂಪೂರ್ಣ ಬಂದ್ ಆಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕಾಗಮಿಸಿ, ಮಣ್ಣು ಹಾಗೂ ಬಂಡೆಗಳನ್ನು ತೆರವುಗೊಳಿಸುತ್ತಿದ್ದು, ಮಳೆಯಿಂದಾಗಿ ಕಾರ್ಯಾಚರಣೆಗೂ ಅಡ್ಡಿಯುಂಟಾಗಿದೆ.
ಇನ್ನೊಂದೆಡೆ ಸಿದ್ದಾಪುರ ತಾಲೂಕಿನ ಹಸ್ವಿಗುಳಿ ಎಂಬಲ್ಲಿ ಮನೆ ಮೇಲೆ ಗುಡ್ಡ ಕುಸಿದಿದ್ದು, ಮನೆಗಳಿಗೂ ಹಾನಿಯಾಗುವ ಭೀತಿ ಎದುರಾಗಿದೆ. ತಾಲೂಕು ಆಡಳಿತ ಗುಡ್ಡ ಕುಸಿತ ಪ್ರದೇಶದಿಂದ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದೆ.