ಬೆಂಗಳೂರು: ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿ ನದಿಗಳು ಅಪಾಯ ಮಟ್ಟಕ್ಕೇರಿವೆ. ಭಾರೀ ಮಳೆಯಿಂದಾಗಿ ಮಲಪ್ರಭಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಖಾನಾಪುರ ತಾಲ್ಲೂಕಿನಲ್ಲಿ 10 ಕ್ಕೂ ಅಧಿಕ ಸೇತುವೆ ಮುಳುಗಡೆಯಾಗಿವೆ.
ನದಿಪಾತ್ರದ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಎಚ್ಚರಿಕೆ ಸಂದೇಶ ನೀಡಲಾಗಿದೆ. ಮಲಪ್ರಭಾ, ಘಟಪ್ರಭಾ, ಕೃಷ್ಣಾ ಜಲಾನಯನ ಪ್ರದೇಶದ ಅಧಿಕಾರಿಗಳಿಗೆ ಕೂಡಲೇ ಮಹಾರಾಷ್ಟ್ರ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಸೂಚನೆ ನೀಡಲಾಗಿದೆ. ನಮ್ಮ ಅಣೆಕಟ್ಟುಗಳ ಒಳಹರಿವು ಹೆಚ್ಚಾಗಲಿದ್ದು ಇದಕ್ಕೆ ಬೇಕಾದ ಸೂಕ್ತ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ನೆರೆ ತಗ್ಗಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಸಂದೇಶ ನೀಡಲಾಗಿದೆ ಎನ್ನಲಾಗಿದೆ.
ಮಲಪ್ರಭಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ನವಿಲುತೀರ್ಥ ಜಲಾಶಯದಿಂದ ಅಪಾರ ನೀರು ಬಿಡುಗಡೆ ಮಾಡಲಾಗಿದ್ದು, ಬಾದಾಮಿ ತಾಲೂಕಿನ 34 ಹಳ್ಳಿಗಳ ಪ್ರದೇಶದಲ್ಲಿ ಆತಂಕ ಶುರುವಾಗಿದೆ. ಗೋವನಕೊಪ್ಪ ಸೇರಿದಂತೆ ಹಲವು ಗ್ರಾಮಗಳಲ್ಲಿ ಆತಂಕ ಎದುರಾಗಿದೆ.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ನವಿಲು ತೀರ್ಥ ಡ್ಯಾಮ್ ನಿಂದ ಹೆಚ್ಚಿನ ನೀರು ಬಿಡುಗಡೆ ಹಿನ್ನೆಲೆಯಲ್ಲಿ ರಾಮದುರ್ಗದ ವೆಂಕಟೇಶ್ವರ ದೇವಾಲಯ ಬಳಿ ಜಲಾವೃತಗೊಂಡಿದೆ. ನೀರಿನ ಪ್ರಮಾಣದಲ್ಲಿ ದೇವಸ್ಥಾನ ಜಲಾವೃತವಾಗುವ ಸಾಧ್ಯತೆ ಇದೆ. ತಾಲೂಕಿನ ಗ್ರಾಮಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ ಎನ್ನಲಾಗಿದೆ.