ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪರೀಕ್ಷಾ ಸಾಮರ್ಥ್ಯವನ್ನು ಶೇ.73 ರಷ್ಟು ಹೆಚ್ಚಿಸಿದ್ದು, ಸಾವಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಕೋವಿಡ್ ನಿರ್ವಹಣೆ ಕುರಿತ ಅಧಿಕಾರಿಗಳು ಮತ್ತು ತಜ್ಞರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಮೂರು ತಿಂಗಳು ಚಳಿಗಾಲ ಮತ್ತು ಹಬ್ಬಗಳು ಇವೆ. ಈ ಹಂತದಲ್ಲಿ ಎಚ್ಚರ ತಪ್ಪಬಾರದು ಎಂದ ಅವರು, ಜನವರಿಯಲ್ಲಿ ಲಸಿಕೆ ಸಿಗುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಜನರು ಸಹಕಾರ ನೀಡಬೇಕು. ಲಸಿಕೆ ಬಂದ ಬಳಿಕ ಅದನ್ನು ಹೇಗೆ ಮತ್ತು ಮೊದಲು ಯಾರಿಗೆ ವಿತರಿಸಬೇಕು ಎಂದು ತಜ್ಞರ ಜೊತೆ ಸಮಾಲೋಚಿಸಲಾಗುವುದು ಎಂದು ಹೇಳಿದ್ದಾರೆ.
ಸೆ. 19 ರವರೆಗೆ ಬೆಂಗಳೂರಿನಲ್ಲಿ 13.20 ಲಕ್ಷ ಪರೀಕ್ಷೆ ಮಾಡಲಾಗಿದೆ. ಒಂದೇ ತಿಂಗಳಲ್ಲಿ 22.90 ಲಕ್ಷ ಪರೀಕ್ಷೆ ಮಾಡಲಾಗಿದೆ. ಪರೀಕ್ಷಾ ಸಾಮರ್ಥ್ಯವನ್ನು ಶೇ.73 ರಷ್ಟು ಹೆಚ್ಚಿಸಲಾಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ, 9.70 ಲಕ್ಷದಷ್ಟು ಪರೀಕ್ಷೆ ಹೆಚ್ಚಿಸಲಾಗಿದೆ. ಮುಂಬೈ, ಚೆನ್ನೈ, ಅಹಮದಾಬಾದ್, ದೆಹಲಿ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಪರೀಕ್ಷೆ ಅತಿ ಹೆಚ್ಚಿದೆ. ಬೇರೆ ನಗರಗಳ ಸರಾಸರಿ ಪರೀಕ್ಷಾ ಹೆಚ್ಚಳ ಪ್ರಮಾಣ ಶೇ.49 ರಷ್ಟಿದೆ ಎಂದು ಮಾಹಿತಿ ನೀಡಿದ್ದಾರೆ.
ಪರೀಕ್ಷೆ ಬೇಗನೆ ಮಾಡಿ ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡಿದರೆ ಸಾವಿನ ಪ್ರಮಾಣ ಕಡಿಮೆಯಾಗುತ್ತದೆ. ರಾಜ್ಯದಲ್ಲಿ ಕೋವಿಡ್ ಮರಣ ಪ್ರಮಾಣ ಶೇ.1.37 ರಷ್ಟಿದೆ. ಇದನ್ನು ಶೇ.1 ಕ್ಕಿಂತ ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸಾವಿನ ಪ್ರಮಾಣ ಶೇ.1.14 ರಷ್ಟಿದೆ. ಇದು ನಾವು ಹೊಂದಿರುವ ಗುರಿಗೆ ಅತಿ ಸಮೀಪದಲ್ಲೇ ಇದ್ದು, ಸಾವಿನ ಪ್ರಮಾಣ ನಿಯಂತ್ರಣಕ್ಕೆ ಬಂದಿದೆ. ಸೋಂಕಿತರ ಪ್ರಮಾಣ ಕೂಡ ಕಡಿಮೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಪರೀಕ್ಷೆ ಸಂಖ್ಯೆ ಹೆಚ್ಚಿಸಿರುವುದರಿಂದಲೇ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಕಡಿಮೆ ಸೋಂಕಿತರ ಸಂಖ್ಯೆ ತೋರಿಸಬೇಕೆಂಬ ಕಾರಣಕ್ಕೆ ಪರೀಕ್ಷೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಸೋಂಕಿತರು ಸಂಖ್ಯೆ ಏರಲು ಪರೀಕ್ಷೆ ಸಂಖ್ಯೆ ಹೆಚ್ಚಿಸಿರುವುದೇ ಕಾರಣ ಎಂಬ ಸೂಕ್ಷ್ಮವನ್ನು ಅರಿಯಬೇಕು ಎಂದು ಹೇಳಿದ್ದಾರೆ.
ನಿರ್ಬಂಧ ವಿಧಿಸುವುದು ಅನಿವಾರ್ಯ:
ಮೈಸೂರಿನಲ್ಲಿ ದಸರಾ ಮಹೋತ್ಸವದ ಅಂಗವಾಗಿ ಮಾಡಿರುವ ದೀಪ ಅಲಂಕಾರ ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಜನರು ಬರುತ್ತಿದ್ದಾರೆ. ಪರಿಸ್ಥಿತಿ ಮೇಲೆ ನಿಗಾ ಇರಿಸುವಂತೆ ಮುಖ್ಯಮಂತ್ರಿ ಅವರು ಸೂಚನೆ ನೀಡಿದ್ದಾರೆ. ಮುಂದೆ ಒಂದೆರಡು ದಿನ ಇದೇ ಸ್ಥಿತಿ ಮುಂದುವರಿದರೆ ಅಧಿಕಾರಿಗಳು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚಿಸಿ ನಿರ್ಬಂಧ ವಿಧಿಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.
ಇಡೀ ದೇಶದಲ್ಲಿ ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಆರ್.ಟಿ.ಪಿ.ಸಿ.ಆರ್. 80 ಸಾವಿರ, ಆಂಟಿಜೆನ್ ಪರೀಕ್ಷೆ 30-40 ಸಾವಿರದಷ್ಟು ಆಗುತ್ತಿದೆ. ಹಬ್ಬದ ಸಮಯದಲ್ಲಿ ಜನರು ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕೆಲವರು ಪರೀಕ್ಷೆ ವೇಳೆ ತಪ್ಪು ಮಾಹಿತಿ ನೀಡಿ, ವಂಚನೆ ಮಾಡಿಕೊಳ್ಳುತ್ತಿದ್ದಾರೆ. ಅಂತಹವರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ಕೂಡ ಸಿಗದಂತಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ನಿರ್ದಾಕ್ಷಿಣ್ಯ ಕ್ರಮ
ಕೆಲ ಖಾಸಗಿ ಆಸ್ಪತ್ರೆಗಳು ದಲ್ಲಾಳಿಗಳ ಮೂಲಕ ಹಾಸಿಗೆ ಹಂಚಿಕೆ ಮಾಡುವ ದೂರುಗಳಿವೆ. ಇದು ಗಮನಕ್ಕೆ ಬಂದರೆ ದೂರು ನೀಡಬೇಕು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.