ಮಂಗಳೂರು: ಕೊರೊನಾ ನಿಯಂತ್ರಣಕ್ಕೆ ನೈಟ್ ಕರ್ಫ್ಯೂ ಜಾರಿಯಾಗುತ್ತಿದ್ದಂತೆಯೇ ಭರ್ಜರಿ ರೇವ್ ಪಾರ್ಟಿ ಆಯೋಜನೆ ಮಾಡಿ, ಪುತ್ರನ ಅಕ್ರಮಗಳಿಗೆ ಬೆಂಬಲ ನೀಡಿದ್ದ ಆರೋಪ ಹಿನ್ನೆಲೆಯಲ್ಲಿ ಮಂಗಳೂರು ಸೈಬರ್, ಎಕನಾಮಿಕ್, ನಾರ್ಕೊಟಿಕ್ ಠಾಣೆ ಮಹಿಳಾ ಹೆಡ್ ಕಾನ್ಸ್ ಟೇಬಲ್ ಓರ್ವರನ್ನು ಅಮಾನತು ಮಾಡಲಾಗಿದೆ.
ಶ್ರೀಲತಾ ಅಮಾನತಾದ ಮಹಿಳಾ ಕಾನ್ಸ್ ಟೇಬಲ್. ರಾಜ್ಯದ 8 ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿಯಾಗುತ್ತಿದ್ದಂತೆ ಏಪ್ರಿಲ್ 10ರಂದು ಹಾಸನ ಜಿಲ್ಲೆಯ ಹೈದೂರು ಗ್ರಾಮದ ರೆಸಾರ್ಟ್ ನಲ್ಲಿ ರಾಜಾರೋಷವಾಗಿ ರೇವ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಇದಕ್ಕೆ ಸ್ವತ: ಪೊಲೀಸರೇ ಬೆಂಬಲ ನೀಡಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿತ್ತು. ಎಸ್ ಪಿ ನೇತೃತ್ವದಲ್ಲಿ ರೆಸಾರ್ಟ್ ಮೇಲೆ ನಡೆದ ದಾಳಿಯಲ್ಲಿ ಮಂಗಳೂರು ಸೈಬರ್ ಕ್ರೈಂ ಮಹಿಳಾ ಹೆಡ್ ಕಾನ್ಸ್ ಟೇಬಲ್ ಶ್ರೀಲತಾ ಹಾಗೂ 24 ಮಹಿಳೆಯರು ಸೇರಿದಂತೆ ಒಟ್ಟು 134 ಜನರನ್ನು ಬಂಧಿಸಲಾಗಿತ್ತು. ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು.
ಶ್ರೀಲತಾ ಪುತ್ರ ಅತುಲ್ ಈ ರೇವ್ ಪಾರ್ಟಿಯ ಪ್ರಮುಖ ರೂವಾರಿ ಎಂಬುದು ವಿಚಾರಣೆಯಿಂದ ಬಹಿರಂಗವಾಗಿದ್ದು, ಮಗನ ಕೃತ್ಯಗಳಿಗೆ ತಾಯಿಯೇ ಸಾಥ್ ನೀಡಿದ್ದರು ಎಂಬುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಶ್ರೀಲತಾರನ್ನು ಅಮಾನತುಗೊಳಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.