ಹಾವೇರಿ: ಲಾಕ್ಡೌನ್ ಜಾರಿಯಾಗಿ ಗಂಡ ಮನೆಯಲ್ಲೇ ಉಳಿದುಕೊಂಡಿದ್ದ ಕಾರಣ ಪ್ರಿಯಕರನನ್ನು ಭೇಟಿಯಾಗಲು ಸಾಧ್ಯವಾಗದ ಪತ್ನಿ ಘೋರಕೃತ್ಯವೆಸಗಿದ್ದಾಳೆ.
ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಎನ್ನುವಂತೆ ಬಿಂಬಿಸಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ರೈಲ್ವೆ ಹಳಿ ಬಳಿ 2020ರ ಮೇ ನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಕಂಡು ಬಂದಿತ್ತು. ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಪೊಲೀಸರು ತನಿಖೆ ಕೈಗೊಂಡಿದ್ದು ಮೃತ ವ್ಯಕ್ತಿ ರಾಣೆಬೆನ್ನೂರು ತಾಲೂಕಿನ ಶ್ರೀನಿವಾಸಪುರ ಗಂಗಾಜಲ ತಾಂಡಾ ನಿವಾಸಿ ಚಂದ್ರಪ್ಪ ಎಂದು ಗುರುತಿಸಿದ್ದಾರೆ.
ಚಂದ್ರಪ್ಪನ ಸಹೋದರಿ ಪೊಲೀಸರಿಗೆ ಈ ಕುರಿತು ದೂರು ನೀಡಿದಾಗ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಚಂದ್ರಪ್ಪ ಎರಡು ಮೂರು ತಿಂಗಳು ಬೆಂಗಳೂರು-ಮುಂಬೈ ಮೊದಲಾದ ಕಡೆಗಳಿಗೆ ಕೆಲಸಕ್ಕೆ ಹೋಗುತ್ತಿದ್ದ. ಲಾಕ್ ಡೌನ್ ಜಾರಿಯಾಗಿದ್ದರಿಂದ ಆತ ಮನೆಯಲ್ಲೇ ಉಳಿದುಕೊಂಡಿದ್ದ. ಗಂಡ ಕೆಲಸಕ್ಕೆ ಹೊರಗೆ ಹೋಗುತ್ತಿದ್ದಾಗ ಅದೇ ಊರಿನ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಚಂದ್ರಪ್ಪನ ಪತ್ನಿಗೆ ಗಂಡನ ಮನೆಯಲ್ಲಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ.
ಪ್ರಿಯಕರನೊಂದಿಗೆ ಸೇರಿಕೊಂಡ ಆಕೆ ಗಂಡನನ್ನು ಕೊಲೆ ಮಾಡಲು ನಿರ್ಧರಿಸಿದ್ದಾಳೆ. ಗಂಡನಿಗೆ ವಿಪರೀತ ಮದ್ಯ ಕುಡಿಸಿ ಕುತ್ತಿಗೆ ಬಿಗಿದು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ. ಮೃತದೇಹವನ್ನು ರೈಲ್ವೆ ಹಳಿ ಬಳಿ ಎಸೆದು ಆತ್ಮಹತ್ಯೆ ಎನ್ನುವಂತೆ ಬಿಂಬಿಸಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಚಂದ್ರಪ್ಪನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.