ದಸರಾ ಅಂದಾಕ್ಷಣ ತಟ್ಟನೆ ನೆನಪಾಗೋದು ಮೈಸೂರು. ಆದ್ರೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಂತೆಯೇ ವಿಜೃಂಭಣೆಯಿಂದ ದಸರಾ ನಡೆಯುವ ಮತ್ತೊಂದು ಕ್ಷೇತ್ರ ಮಂಗಳೂರಿನಲ್ಲಿದೆ. ಅದೇ ಮಂಗಳೂರಿನ ನಗರ ಭಾಗದಲ್ಲೇ ಇರುವ ಕುದ್ರೋಳಿ ಗೋಕರ್ಣನಾಥ ದೇವಾಲಯ. ಕಾರಣಿಕ ಕ್ಷೇತ್ರವೆಂದೇ ಖ್ಯಾತವಾದ ಇಲ್ಲಿ ಗೋಕರ್ಣನಾಥೇಶ್ವರನ ಭವ್ಯ ಹಾಗೂ ಸುಂದರ ದೇವಾಲಯವಿದೆ. ಕ್ರಾಂತಿಪುರುಷ ನಾರಾಯಣ ಗುರುಗಳ ಸಮ್ಮುಖದಲ್ಲಿ ಅವರ ಕಲ್ಪನೆಯಂತೆಯೇ ಸ್ಥಾಪನೆಗೊಂಡ ದೇವಾಲಯಗಳ ಪೈಕಿ ಈ ದೇವಾಲಯ ಬಹಳ ಮಹತ್ವವಾದದ್ದು.
ದ್ರಾವಿಡ ಶೈಲಿಯ ಈ ದೇವಾಲಯದ ಮುಂಭಾಗದಲ್ಲಿ ಭವ್ಯವಾದ ರಾಜಗೋಪುರವಿದೆ. ಎತ್ತರವಾದ ಆನೆಯ ಪ್ರತಿಮೆಗಳು ಭಕ್ತರನ್ನು ಸ್ವಾಗತಿಸುತ್ತವೆ. ವಿಶಾಲವಾದ ಪ್ರಾಕಾರವಿರುವ ದೇವಾಲಯದ ಗೋಪುರಗಳಲ್ಲಿ ಈಶ್ವರ, ಶಿವಗಣಗಳು ಸೇರಿದಂತೆ ದೇವಾನು ದೇವತೆಗಳ ಗಾರೆ ಶಿಲ್ಪಗಳಿವೆ. ಗರ್ಭಗೃಹದಲ್ಲಿ ಗೋಕರ್ಣನಾಥೇಶ್ವರನನ್ನು ಪ್ರತಿಷ್ಠಾಪಿಸಲಾಗಿದೆ. ಶಿರದ ಮೇಲೆ ಗಂಗೆಯ ಧರಿಸಿದ ಶಿವಮುಖವಾಡದಲ್ಲಿ ಗೋಕರ್ಣನಾಥೇಶ್ವರನನ್ನು ನೋಡಲು ಎರಡು ಕಣ್ಣು ಸಾಲದು ಎನಿಸುತ್ತದೆ. ದೇವಾಲಯದ ಪ್ರಾಕಾರದಲ್ಲಿ ಗಣಪತಿ, ಕೃಷ್ಣ ಹಾಗೂ ನಾರಾಯಣ ಗುರುಗಳ ಪ್ರತ್ಯೇಕ ಮಂದಿರಗಳಿವೆ. ಹೊರಭಾಗದಿಂದ ಇದು ಗೋಲ್ಡನ್ ಟೆಂಪಲ್ ಬಣ್ಣದಂತೆ ಭಾಸವಾಗುತ್ತದೆ.
ಇನ್ನು ಈ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ನವರಾತ್ರಿಯ ವೇಳೆ ನವದುರ್ಗೆಯರನ್ನು ಕೂರಿಸಿ ಮಾಡುವ ಭವ್ಯ ಮೆರವಣಿಗೆ ವಿಶೇಷ ಪೂಜೆಗಳು ಜನಾಕರ್ಷಣೆಯ ಕೇಂದ್ರವಾಗಿವೆ. ಈಗ ಇದು ಮಂಗಳೂರು ದಸರಾ ಎಂದೇ ಖ್ಯಾತಿ ಪಡೆದಿದೆ. ಶಿವರಾತ್ರಿಯ ಸಮಯದಲ್ಲಿ ಕೂಡ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಈ ದೇವಾಲಯಕ್ಕೆ ಹೊರ ಜಿಲ್ಲೆ ಮಾತ್ರವಲ್ಲದೇ, ಹೊರ ರಾಜ್ಯದಿಂದಲೂ ಪ್ರವಾಸಿಗರು ಬರುತ್ತಾರೆ. ಪ್ರವಾಸಿ ಹಡಗಿನಲ್ಲಿ ಬರುವ ಬೇರೆ ಬೇರೆ ದೇಶದ ಪ್ರವಾಸಿಗರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.