ಬೆಂಗಳೂರು: ಕಂಪನಿಯ ಮಾಲೀಕ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಯುವತಿಯೊಬ್ಬಳು ವೈಟ್ ಫೀಲ್ಡ್ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿದ್ದಾಳೆ.
ಬೆಳ್ಳಂದೂರು ನಿವಾಸಿಯಾಗಿರುವ 26 ವರ್ಷದ ಯುವತಿ ನೀಡಿದ ದೂರಿನ ಅನ್ವಯ ಹನುಮಂತ ಕಲ್ಲೂರು ಎಂಬುವನ ವಿರುದ್ಧ ಕೇಸ್ ದಾಖಲಿಸಲಾಗಿದೆ. 2019 ರಲ್ಲಿ ಯುವತಿ ಹನುಮಂತನ ಕಂಪನಿಯಲ್ಲಿ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ. ಆಕೆಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಆರೋಪಿ ಪ್ರೀತಿಗೆ ಒಪ್ಪದಿದ್ದಾಗ ಅವಾಚ್ಯ ಪದಗಳಿಂದ ನಿಂದಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಬ್ಲಾಕ್ಮೇಲ್ ಮಾಡಿ ಹಲ್ಲೆ ನಡೆಸಿದ್ದಾನೆ.
ತನ್ನ ದಾಖಲೆ ದುರ್ಬಳಕೆ ಮಾಡಿಕೊಂಡು ವಿವಿಧ ಬ್ಯಾಂಕುಗಳಿಂದ 86 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ಪ್ರಾಣ ಬೆದರಿಕೆ ಹಾಕಿರುವುದಾಗಿ ಯುವತಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆನ್ನಲಾಗಿದೆ.